ಶಿಕ್ಷಣ, ತರಬೇತಿ ಪಡೆದವರಿಗೆ ಸಹಕಾರ ಕ್ಷೇತ್ರಗಳಲ್ಲಿ ಹುದ್ದೆ ಮೀಸಲು : ಕೆ.ಎನ್.ರಾಜಣ್ಣ

Update: 2024-11-14 15:23 GMT

ಕೆ.ಎನ್.ರಾಜಣ್ಣ

ಬೆಂಗಳೂರು : ಸಹಕಾರ ಕ್ಷೇತ್ರಗಳಲ್ಲಿ ಶಿಕ್ಷಣ ಹಾಗೂ ತರಬೇತಿ ಪಡೆದವರಿಗೆ ಸಹಕಾರ ಬ್ಯಾಂಕುಗಳಲ್ಲಿ, ಸಹಕಾರ ಕ್ಷೇತ್ರಗಳಲ್ಲಿ ಹುದ್ದೆಗಳನ್ನು ಮೀಸಲಿಡಲು ಪ್ರಯತ್ನಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ಗುರುವಾರ ನಗರದ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಕಾರ್ಯಕ್ರಮದಲ್ಲಿ ‘ಸಹಕಾರ ಪತ್ರಿಕೆ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಉತ್ತಮವಾಗಿ ಕೆಲಸ ಮಾಡುವವರಿಗೆ ಸಹಕಾರಿಗಳು ಬೆಂಬಲ ನೀಡಬೇಕು. ಸಂಸ್ಥೆಗೆ ಬಂದ ಮೇಲೆ ರಾಜಕಾರಣದ ಚಿಂತನೆ ಹೊರಗಿಟ್ಟು, ಒಳಗೆ ಬಂದಾಗ ಸಹಕಾರಿಗಳ ಅಭ್ಯುದಯ ಸಾಧ್ಯ. ಸಹಕಾರ ಕ್ಷೇತ್ರಗಳಲ್ಲಿ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದರು.

‘ವಿಕಸಿತ ಭಾರತ’ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ಧ್ಯೇಯದೊಂದಿಗೆ ಸಪ್ತಾಹ ಆಚರಿಸಲಾಗುತ್ತಿದೆ. ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳುವಳಿಯನ್ನು ಬಲಪಡಿಸುವ ಸಂಕಲ್ಪ ಹೊಂದಿದ್ದೇವೆ. ರಾಜ್ಯದ ಎಲ್ಲಾ ಸಹಕಾರಿಗಳು ಸಹಕಾರ ಚಳುವಳಿಯನ್ನು ಬಲಪಡಿಸಬೇಕು. ಸಹಕಾರ ಆಂದೋಲನ ರಾಜ್ಯ ರಾಷ್ಟ್ರಮಟ್ಟದಲ್ಲಿ ಮುಂದಾಳತ್ವ ವಹಿಸಬೇಕು ಎಂದು ಕೆ.ಎನ್.ರಾಜಣ್ಣ ಹೇಳಿದರು.

ಸಹಕಾರಿಗಳ ಆಂದೋಲನವು ಅವರ ಬೇಡಿಕೆಗಳ ಅನುಗುಣವಾಗಿ ಸಂಸ್ಥೆಗಳು ಸ್ಥಾಪಿತವಾಗಬೇಕು. ಸಹಕಾರದ ಆಂದೋಲನದಲ್ಲಿ ಸರಕಾರವು ಹೆಚ್ಚು ಪ್ರಭಾವ ಬೀರುವ ಪ್ರಯತ್ನ ಮಾಡಿಲ್ಲ. ಸಹಕಾರಿ ಆಂದೋಲನವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಹಕಾರ ಕ್ಷೇತ್ರ ಉತ್ತಮವಾಗಿ ಕೆಲಸ ಮಾಡಬೇಕಾದರೆ ಕೆಲವು ಅಡಚಣೆಗಳಿದ್ದು ಅವುಗಳಿಗೆ ತಿದ್ದುಪಡಿ ತರಲಾಗುವುದು ಎಂದು ಕೆ.ಎನ್.ರಾಜಣ್ಣ ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಸಹಕಾರ ತತ್ವ-ಆಚರಣೆ ಬಗ್ಗೆ ಜನಜಾಗೃತಿ ಮೂಡಿಸುವುದೇ ಸಹಕಾರ ಸಪ್ತಾಹದ ಉದ್ದೇಶವಾಗಿದ್ದು, ಸಪ್ತಾಹದ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳು ಜನಜಾಗೃತಿಗೆ ಸಂಬಂಧಿಸಿದಂತೆ ಇರಬೇಕು ಎಂದು ತಿಳಿಸಿದರು.

ಸಹಕಾರ ಸಪ್ತಾಹವನ್ನು ನ.14ರಿಂದ 20ರ ವರೆಗೆ 7 ದಿನಗಳ ಕಾಲ ಆಚರಿಸಲಾಗುತ್ತದೆ. ನ.14ರಂದು ಭಾರತದ ಪ್ರಥಮ ಪ್ರಧಾನಿ ನೆಹರೂ ಅವರ ಹುಟ್ಟುಹಬ್ಬವಾಗಿದ್ದು, ನೆಹರು ಅವರು ಪಂಚವಾರ್ಷಿಕ ಯೋಜನೆಯಲ್ಲಿ ಬಹಳಷ್ಟು ಯೋಜನೆಯನ್ನು ಸಹಕಾರ ಕ್ಷೇತ್ರಕ್ಕೆ ನೀಡಿದ್ದರು. ಭಾರತ ದೇಶದ ಆರ್ಥಿಕ ಹೆಬ್ಬಾಗಿಲು ಸಹಕಾರ ಕ್ಷೇತ್ರ ಎಂದು ಬಹಳವಾಗಿ ನಂಬಿದ್ದರು. ಆದ್ದರಿಂದ ಅವರು ಹುಟ್ಟು ಹಬ್ಬದಂದು ಸಹಕಾರ ಸಪ್ತಾಹವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

ಗಾಂಧೀಜಿಯವರು ಹೇಳಿದಂತೆ ಪ್ರತಿ ಹಳ್ಳಿಯಲ್ಲೂ ಒಂದೊಂದು ಸಹಕಾರ ಕ್ಷೇತ್ರಗಳಿರಬೇಕು. ರೈತರ ಎಲ್ಲ ಕಲ್ಯಾಣ ಕಾರ್ಯಕ್ರಮಗಳು ಸಹಕಾರ ಕ್ಷೇತ್ರಗಳ ಮೂಲಕ ಆಗಬೇಕು. ಶಿಕ್ಷಣ ಕ್ಷೇತ್ರ ಪ್ರಾರಂಭವಾಗಬೇಕು. ಪ್ರತಿಯೊಬ್ಬರು ವಿದ್ಯಾವಂತರಾದಾಗ ಮಾತ್ರ ಮಹಾತ್ಮಾ ಗಾಂಧೀಜಿಯವರ ಕನಸಿನಂತೆ ರಾಮರಾಜ್ಯವಾಗಲು ಸಾಧ್ಯ ಎಂದು ಜಿ.ಟಿ.ದೇವೇಗೌಡ ಹೇಳಿದರು.

ರಾಜ್ಯದಲ್ಲಿ 47 ಸಾವಿರ ಸಹಕಾರ ಕ್ಷೇತ್ರಗಳಿದ್ದು, 2 ಲಕ್ಷ ಕೋಟಿ ಠೇವಣಿ ಇಡಲಾಗಿದ್ದು, 2 ಲಕ್ಷ ಕೋಟಿ ರೂ. ಸಾಲ ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಹಕಾರ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆದವರಿಗೆ ಸಹಕಾರ ಬ್ಯಾಂಕುಗಳಲ್ಲಿ, ಸಹಕಾರ ಕ್ಷೇತ್ರಗಳಲ್ಲಿ ಹುದ್ದೆಗಳನ್ನು ಮೀಸಲಿಡಬೇಕು. ಈ ಕ್ಷೇತ್ರಗಳಲ್ಲಿ ದುರುಪಯೋಗಪಡಿಸಿಕೊಂಡವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಸಹಕಾರ ಸಚಿವರ ನೇತೃತ್ವದಲ್ಲಿ ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯ ನಿವೃತ್ತ ಮುಖ್ಯಸ್ಥ ಡಾ.ಕೆ.ಪಿ.ರಮೇಶ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್, ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಎಲ್ಲ ಸಹಕಾರಿ ಸಂಸ್ಥೆಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ನಿರ್ದೇಶಕರುಗಳು, ಸಹಕಾರಿಗಳು ಉಪಸ್ಥಿತರಿದ್ದರು.

‘ಸಹಕಾರ ಬ್ಯಾಂಕು, ಸಂಘ-ಸಂಸ್ಥೆಗಳಲ್ಲಿ 20-30 ವರ್ಷಗಳಿಂದ ಇದ್ದವರೇ ಇರುತ್ತಾರೆ. ಯುವಕರಿಗೆ ಆದ್ಯತೆ ಸಿಗುತ್ತಿಲ್ಲ. ಆದ್ದರಿಂದ ಒಬ್ಬರು ಎರಡು ವರ್ಷ ಮಾತ್ರ ಸಹಕಾರ ಕ್ಷೇತ್ರದ ಚುನಾವಣೆಗಳಲ್ಲಿ ಸ್ಪರ್ಧಿಸುವಂತೆ ಕಾನೂನು ತಿದ್ದುಪಡಿ ತರುವ ಚಿಂತನೆಯಿದೆ’

-ಕೆ.ಎನ್.ರಾಜಣ್ಣ,ಸಹಕಾರ ಸಚಿವ

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News