ವಾರ್ತಾಭಾರತಿ ಇಮೇಲ್, ಯೂಟ್ಯೂಬ್ ಹ್ಯಾಕ್: ಎಫ್ ಐ ಆರ್ ದಾಖಲು
ಬೆಂಗಳೂರು, ನ.14: ವಾರ್ತಾಭಾರತಿಯ ಇಮೇಲ್ ಐಡಿ ಹಾಗು ಯೂಟ್ಯೂಬ್ ಚಾನಲ್ ಅನ್ನು ಹ್ಯಾಕ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಎಫ್ ಐ ಆರ್ ದಾಖಲಾಗಿದೆ. ವಾರ್ತಾಭಾರತಿ ನೀಡಿರುವ ದೂರಿನ ಆಧಾರದಲ್ಲಿ ಬೆಂಗಳೂರಿನ ನಗರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್ ಐ ಆರ್ ದಾಖಲಾಗಿದೆ.
ವಾರ್ತಾಭಾರತಿ ಮಾಧ್ಯಮ ಸಂಸ್ಥೆಯ ಇಮೇಲ್ ಐಡಿ ಹಾಗು ಯೂಟ್ಯೂಬ್ ಚಾನಲ್ ಹ್ಯಾಕ್ ಆಗಿರುವುದು ಗುರುವಾರ ಬೆಳಗ್ಗೆ ಗಮನಕ್ಕೆ ಬಂದಿತ್ತು. ಬುಧವಾರ ತಡರಾತ್ರಿ ಸೈಬರ್ ದುಷ್ಕರ್ಮಿಗಳು ಮೊದಲು ಇಮೇಲ್ ಐಡಿ ಅನ್ನು ಹ್ಯಾಕ್ ಮಾಡಿ ಆ ಮೂಲಕ ಆ ಇಮೇಲ್ ಜೊತೆ ಇದ್ದ ವಾರ್ತಾಭಾರತಿಯ ಯೂಟ್ಯೂಬ್ ಚಾನಲ್ youtube.com/varthabharatinews ಅನ್ನು ಹ್ಯಾಕ್ ಮಾಡಿದ್ದಾರೆ. ಇದರಿಂದಾಗಿ ಯೂಟ್ಯೂಬ್ ಚಾನಲ್ ನಲ್ಲಿ ವಾರ್ತಾಭಾರತಿಗೆ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡುವಂತಿರಲಿಲ್ಲ. ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಚಾನಲ್ ಅನ್ನು ದುರುಪಯೋಗ ಪಡಿಸಿಕೊಂಡು ಏನಾದರೂ ಸಮಾಜ ವಿರೋಧಿ ಕಾರ್ಯಕ್ರಮ ಅಥವಾ ಸಂದೇಶಗಳನ್ನು ಪ್ರಸಾರ ಮಾಡುವ ಸಾಧ್ಯತೆಯೂ ಇರುವುದರಿಂದ ಶೀಘ್ರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಇಮೇಲ್ ಐಡಿ ಹಾಗು ಚಾನಲ್ ಅನ್ನು ಹ್ಯಾಕ್ ಮಾಡಿದವರಿಂದ ಬಿಡಿಸಿ ಕೊಡಬೇಕೆಂದು ವಾರ್ತಾಭಾರತಿ ದೂರು ಸಲ್ಲಿಸಿತ್ತು. ಈಗ ಅದಕ್ಕೆ ಸಂಬಂಧಿಸಿ ಎಫ್ ಐ ಆರ್ ದಾಖಲಾಗಿದೆ.
ಈ ಮಧ್ಯೆ ಗುರುವಾರ ಮಧ್ಯಾಹ್ನದ ಬಳಿಕ ವಾರ್ತಾಭಾರತಿಯ ಚಾನಲ್ ಅನ್ನು ಮತ್ತೆ ಸಂಸ್ಥೆಯ ಇನ್ನೊಂದು ಅಧಿಕೃತ ಇಮೇಲ್ ಗೆ ಯೂಟ್ಯೂಬ್ ವಾಪಸ್ ಕೊಡಿಸಿದೆ. ಅದರಲ್ಲಿ ಈಗ ವಾರ್ತಾಭಾರತಿಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಹ್ಯಾಕ್ ಆಗಿರುವ ಇಮೇಲ್ ಇನ್ನಷ್ಟೇ ಸಂಸ್ಥೆಗೆ ವಾಪಸ್ ಸಿಗಬೇಕಿದೆ.