ಮುಡಾ ನಿವೇಶನ ಹಗರಣ : ವಿಚಾರಣೆಗೆ ಹಾಜರಾದ ಮಾಜಿ ಅಧ್ಯಕ್ಷ ಕೆ.ಮರೀಗೌಡ
ಬೆಂಗಳೂರು : ಮುಡಾ ನಿವೇಶನ ಹಂಚಿಕೆಯ ಹಗರಣ ಪ್ರಕರಣ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಮರೀಗೌಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ವಿಚಾರಣೆಗೆ ಹಾಜರಾಗಬೇಕೆಂದು ಮುಡಾದ ಮಾಜಿ ಅಧ್ಯಕ್ಷ ಮರಿಗೌಡ ಅವರಿಗೆ ಕೆಲ ದಿನಗಳ ಹಿಂದೆ ಸಮನ್ಸ್ ಜಾರಿ ಮಾಡಿತ್ತು. ಅನಾರೋಗ್ಯದ ಹಿನ್ನಲೆಯಲ್ಲಿ ಸಮಯ ಅವಕಾಶ ನೀಡಬೇಕೆಂದು ಕೋರಿದ್ದರು.
ಗುರುವಾರ ಬೆಂಗಳೂರಿನ ಶಾಂತಿ ನಗರದಲ್ಲಿರುವ ಈಡಿ ಕಚೇರಿಗೆ ಆಗಮಿಸಿದ ಮರಿಗೌಡ ಅವರು ತನಿಖಾ ತಂಡದ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಕುಟುಂಬಸ್ಥರಿಗೆ ಸಮನ್ಸ್ ಸಾಧ್ಯತೆ :
ಮುಡಾ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ ವಿಚಾರಣೆಗೆ ಕೂಡಲೇ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರಿಗೆ ಸಮನ್ಸ್ ಜಾರಿ ಮಾಡಲು ಮುಂದಾಗಿದೆ.
ಸಿದ್ದರಾಮಯ್ಯ, ಪತ್ನಿ ಪಾರ್ವತಿ ಹಾಗೂ ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಪ್ರಕರಣ ಎಲ್ಲ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಯಾವುದೇ ಕ್ಷಣದಲ್ಲಿ ಸಮನ್ಸ್ ಜಾರಿ ಮಾಡುವ ಸಂಭವವಿದೆ.