ಬೆಂಗಳೂರು | 16 ಎಕರೆ ಭೂ ಕಬಳಿಕೆ ಆರೋಪ: ಇಬ್ಬರ ಬಂಧನ

Update: 2024-02-07 16:31 GMT

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ.ಮೌಲ್ಯದ 16 ಎಕರೆ ಭೂಮಿ ಕಬಳಿಸಲು ಭೂಮಾಲಕರ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದ ಆರೋಪದಡಿ ಮಾಗಡಿ ತಾಲೂಕಿನ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರನ್ನು ಇಲ್ಲಿನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ರಾಜರಾಜೇಶ್ವರಿನಗರದ ಎಚ್.ಎಂ.ಕೃಷ್ಣಮೂರ್ತಿ ಯಾನೆ ಜೇಡರಹಳ್ಳಿ ಕೃಷ್ಣಪ್ಪ ಮತ್ತು ಈತನ ಸಹಚರ ಮಾಗಡಿ ತಾಲೂಕಿನ ಕಾಂಗ್ರೆಸ್ ಮುಖಂಡ ಗೋವಿಂದರಾಜು ಎಂಬುವರನ್ನು ಬಂಧಿತರು ಎಂದು ಗುರುತಿಸಲಾಗಿದೆ.

ಮಾಗಡಿ ರಸ್ತೆ ಹೇರೋಹಳ್ಳಿಯ ಸಮೀಪ ಸ್ಥಳೀಯ ನಿವಾಸಿ ಶಂಕರಣ್ಣ ಎಂಬವರಿಗೆ ಸೇರಿದ 16 ಎಕರೆ ಭೂಮಿಯನ್ನು ಕಬಳಿಸಲು ಜೇಡರಹಳ್ಳಿ ಕೃಷ್ಣಪ್ಪ ಯತ್ನಿಸಿದ್ದ. ಈ ಸಂಬಂಧ ಶಂಕರಣ್ಣ ನೀಡಿದ ದೂರಿನ ಮೇರೆಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ ಜೇಡರಹಳ್ಳಿ ಕೃಷ್ಣಪ್ಪ ಮತ್ತು ಸಹಚರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಿತ್ರಾರ್ಜಿತವಾಗಿ ಶಂಕರಣ್ಣಗೆ ಬಂದಿದ್ದ ಭೂಮಿ ಮೇಲೆ ಜೇಡರಹಳ್ಳಿ ಕೃಷ್ಣಪ್ಪನ ಕಣ್ಣು ಬಿದ್ದಿದೆ. ಕಡಿಮೆ ಬೆಲೆಗೆ ಭೂಮಿ ಖರೀದಿಗೆ ಜೇಡರಹಳ್ಳಿ ಕೃಷ್ಣಪ್ಪ ಯತ್ನಿಸಿದ್ದ. ಮಾರಾಟ ಮಾಡಲು ಶಂಕರಣ್ಣ ನಿರಾಕರಿಸಿದ್ದರು. ಇತ್ತೀಚೆಗೆ ಶಂಕರಪ್ಪ ಕುಟುಂಬ ಸದಸ್ಯರು ಬಡಾವಣೆ ಮಾಡಲು ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿದ್ದರು. ಇದನ್ನು ಗಮನಿಸಿದ ಜೇಡರಹಳ್ಳಿ ಕೃಷ್ಣಪ್ಪ ಮತ್ತು ಸಹಚರರು ಸ್ಥಳಕ್ಕೆ ಬಂದು ಶಂಕರಪ್ಪ ಕುಟುಂಬ ಸದಸ್ಯರಿಗೆ ಬೆದರಿಕೆ ಒಡ್ಡಿದ್ದರು.

ಜನವರಿಯಲ್ಲಿ ನಾಗರಬಾವಿ ಉಪ ನೋಂದಣಿ ಕಚೇರಿಯಲ್ಲಿ ನಕಲಿ ದಾಖಲೆ ಸಲ್ಲಿಸಿ ಭೂಮಿಯನ್ನು ಕ್ರಯಪತ್ರ ಮಾಡಿಸಿಕೊಂಡಿದ್ದರು. ಇದನ್ನು ತೋರಿಸಿ ಭೂಮಿ ಕಬಳಿಸಲು ಜೇಡರಹಳ್ಳಿ ಕೃಷ್ಣಪ್ಪ ಮತ್ತು ಸಹಚರರ ತಂಡ ಪ್ರಯತ್ನಿಸಿತ್ತು. ನೊಂದ ಶಂಕರಪ್ಪ, ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಎಸ್.ಗಿರೀಶ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿ ರಕ್ಷಣೆ ಕೋರಿದ್ದರು.

ಡಿಸಿಪಿ ಸೂಚನೆ ಮೇರೆಗೆ ಬ್ಯಾಡರಹಳ್ಳಿ ಠಾಣೆಗೆ ಸಂತ್ರಸ್ತ ದೂರು ಸಲ್ಲಿಸಿದ್ದರು. ಇದರನ್ವಯ ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿ ಜೇಡರಹಳ್ಳಿ ಕೃಷ್ಣಪ್ಪ ಹಾಗೂ ಆತನ ಸಹಚರನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News