ಬೆಂಗಳೂರು | ಯುವಕನ ಲಿಂಗ ಪರಿವರ್ತಿಸಿದ ಆರೋಪ : ಐವರು ತೃತೀಯ ಲಿಂಗಿಗಳ ವಿರುದ್ಧ ಎಫ್‍ಐಆರ್
ಬೆಂಗಳೂರು : ಮಂಗಳಮುಖಿಯಾಗುವಂತೆ ಒತ್ತಾಯಿಸಿ ಯುವಕನ ಲಿಂಗ ಪರಿವರ್ತಿಸಿದ ಆರೋಪದಡಿ ಐವರು ತೃತೀಯ ಲಿಂಗಿಗಳ ವಿರುದ್ಧ ಇಲ್ಲಿನ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
18 ವರ್ಷದ ಯುವಕ ನೀಡಿದ ದೂರಿನ ಮೇರೆಗೆ ಚಿತ್ರಾ, ಪ್ರೀತಿ, ಕಾಜಲ್, ಅಶ್ವಿನಿ, ಮುಗಿಲ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಡಿ.ಜೆ.ಹಳ್ಳಿಯಲ್ಲಿ ವಾಸವಾಗಿದ್ದ ಯುವಕ ಟೀ ಅಂಗಡಿಯಲ್ಲಿ 3 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಅದೇ ಟೀ ಅಂಗಡಿಗೆ ಬರುತ್ತಿದ್ದ ತೃತೀಯ ಲಿಂಗಿಗಳು ‘ನಿನ್ನನ್ನು ದೊಡ್ಡ ಮನೆಯಲ್ಲಿಟ್ಟುಕೊಂಡು ಹಣ ಸಂಪಾದಿಸುವ ಒಳ್ಳೆಯ ದಾರಿ ತೋರಿಸುತ್ತೇವೆ’ ಎಂದು ಯವಕನ್ನು ಪುಸಲಾಯಿಸಿದ್ದಾರೆ ಎನ್ನಲಾಗಿದೆ.
ಆರೋಪಿಗಳನ್ನು ನಂಬಿದ ಯುವಕ ಅವರೊಂದಿಗೆ ಹೋದಾಗ ಕೊಲೆ ಮಾಡುವುದಾಗಿ ಬೆದರಿಸಿ ಭಿಕ್ಷಾಟನೆಗೆ ತಳ್ಳಿದ್ದಾರೆ. ಹೀಗೆ ಮೂರು ವರ್ಷಗಳ ಕಾಲ ಭಿಕ್ಷಾಟನೆ ಮಾಡಿ ಮಂಗಳಮುಖಿಯರಿಗೆ ಯುವಕ ಹಣ ತಂದುಕೊಟ್ಟಿದ್ದಾನೆ. ಇನ್ನೂ ಹೆಚ್ಚು ಸಂಪಾದಿಸಬೇಕು ಎಂಬ ದುರುದ್ದೇಶಕ್ಕೆ ಬಿದ್ದ ಮಂಗಳಮುಖಿಯರು, ‘ನೀನು ಗಂಡಾಗಿರುವಾಗಲೇ ದಿನಕ್ಕೆ 2 ಸಾವಿರ ದುಡಿಯುತ್ತಿದ್ದಿ. ಹೆಣ್ಣಾದರೆ ಹೆಚ್ಚು ಸಂಪಾದಿಸಬಹುದು’ ಎಂದು ಲಿಂಗ ಪರಿವರ್ತನೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೆ ಯುವಕ ಒಪ್ಪದಿದ್ದಾಗ ಆತನನ್ನು ಹಿಂಸಿಸಿ ಬೆನ್ನಿಗೆ ಮತ್ತು ಬರುವ ಇಂಜೆಕ್ಷನ್ ಕೊಟ್ಟು ಲಿಂಗ ಪರಿವರ್ತಿಸಿದ್ದಾರೆ. ನಂತರ ಯುವಕನನ್ನು ದೇವರ ಬಳಿ ಕರೆದೊಯ್ದು ಪೂಜೆ ಸಲ್ಲಿಸಿ, ಲೈಂಗಿಕ ಕಾರ್ಯಕರ್ತಳಾಗಿ ಕೆಲಸ ಮಾಡು ಎಂದು ಪೀಡಿಸಿದ್ದಾರೆ. ಇಷ್ಟಕ್ಕೆ ಬಿಡದೇ 5 ಲಕ್ಷ ರೂ. ಹಣ ಕೊಡು ಎಂದು ಯುವಕನನ್ನು ಹಿಂಸಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಯುವಕ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.