ಬೆಂಗಳೂರು | ರೌಡಿಶೀಟರ್ ಹತ್ಯೆ ಆರೋಪ: ಆರು ಮಂದಿಯ ಬಂಧನ
ಬೆಂಗಳೂರು: ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಪ್ಪ ಗಾರ್ಡನ್‍ನಲ್ಲಿ ರೌಡಿಶೀಟರ್ ಶರತ್ ಎಂಬಾತನನ್ನು ಹತ್ಯೆ ಮಾಡಿದ ಆರೋಪದಡಿ ಆರು ಮಂದಿಯನ್ನು ಇಲ್ಲಿನ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ರೌಡಿಶೀಟರ್ ಶರತ್(35) ಎಂಬಾತನನ್ನು ಹತ್ಯೆ ಮಾಡಿದ ಆರೋಪದಡಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿದ್ದ ಸ್ಟೀಫನ್ ಹಾಗೂ ಸಹಚರರಾದ ಚಂದ್ರಶೇಖರ್, ಶೇಖರ್, ಮಣಿಕಂಠ, ಸಿಂಬು, ಕಿರಣ್ ಎಂಬುವರನ್ನು ಕಾಟನ್‍ಪೇಟೆ ಠಾಣಾ ಪೊಲೀಸರು ಬಂಧಿಸಿರುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಮೃತ ಶರತ್ ಹಾಗೂ ಆರೋಪಿಗಳೆಲ್ಲರೂ ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ಬಂಧಿತ ಚಂದ್ರಶೇಖರ್ ನ ಸಹಚರನಾಗಿದ್ದ ಪ್ರಭಾಕರ್ ನನ್ನು 2020ರಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಶರತ್ ಆರೋಪಿಯಾಗಿದ್ದ. ಇದರಿಂದ 2017-18ರಿಂದ ಶರತ್ ಹಾಗೂ ಚಂದ್ರಶೇಖರ್ ಮಧ್ಯೆ ವೈಷಮ್ಯವಿತ್ತು. ಅಲ್ಲದೆ, ಚಂದ್ರಶೇಖರ್ ಗೂ ಬಹಳಷ್ಟು ಕಿರುಕುಳ ನೀಡಿದ್ದ ಎನ್ನಲಾಗಿದೆ.
ಶರತ್‍ನ ಕಿರುಕುಳ ತಾಳಲಾರದೇ ಹತ್ಯೆ ಮಾಡಲು ಸಂಚು ರೂಪಿಸಿದ್ದ ಚಂದ್ರಶೇಖರ್ ತನ್ನ ಸಹಚರರನ್ನು ಒಗ್ಗೂಡಿಸಿಕೊಂಡಿದ್ದ. ಇದೇ ವೇಳೆ, ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಮೂರು ವರ್ಷ ಜೈಲಿನಲ್ಲಿದ್ದು, 2024ರ ಫೆಬ್ರವರಿಯಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಸ್ಟೀಫನ್‍ನನ್ನು ಆರೋಪಿಗಳ ಗುಂಪು ಸಂಪರ್ಕ ಮಾಡಿತ್ತು. ಬಳಿಕ ಕೊಲೆಗೆ ಒಳಸಂಚು ರೂಪಿಸಿಕೊಂಡು ಮಾ.8ರ ಶಿವರಾತ್ರಿ ಹಬ್ಬದಂದೇ ಡ್ರ್ಯಾಗರ್ ನಿಂದ ಶರತ್‍ನನ್ನು ಹತ್ಯೆ ಮಾಡಲಾಗಿತ್ತು ಎಂದು ಹೇಳಲಾಗಿದೆ.
ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಎರಡನೇ ಆರೋಪಿಯಾಗಿರುವ ಚಂದ್ರಶೇಖರ್ ಈ ಹಿಂದೆ ಜೆ.ಪಿ.ನಗರ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಎಂಬುದಾಗಿ ತನಿಖೆಯಿಂದ ತಿಳಿದುಬಂದಿದೆ. ಮತ್ತಷ್ಟು ತನಿಖೆ ಮುಂದುವರೆದಿದೆ ಎಂದು ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.