ಬೆಂಗಳೂರು | ಚಿಕಿತ್ಸೆ ವೇಳೆ ಮಾಂಗಲ್ಯ ಸರ ಕಳವು ಆರೋಪ: ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಎಫ್‍ಐಆರ್

Update: 2024-02-12 13:52 GMT

ಬೆಂಗಳೂರು : ಚಿಕಿತ್ಸೆಗೆಂದು ತೆರಳಿದ್ದ ಮಹಿಳೆಯ ಚಿನ್ನದ ಸರ ಕಳವು ಮಾಡಿದ ಆರೋಪದಡಿ ಇಲ್ಲಿನ ಮೂಡಲಪಾಳ್ಯದ ಖಾಸಗಿ ಆಸ್ಪತ್ರೆ ಮೂವರು ಸಿಬ್ಬಂದಿಗಳ ವಿರುದ್ಧ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ರಾಜೇಶ್ವರಿ ಎಂಬ ಮಹಿಳೆಯ ಸರವನ್ನು ಕಳ್ಳತನವಾಗಿದ್ದು, ಮೂಡಲಪಾಳ್ಯದ ಖಾಸಗಿ ಆಸ್ಪತ್ರೆಯ ಇಬ್ಬರು ನರ್ಸ್ ಹಾಗೂ ಸ್ವೀಪರ್ ವಿರುದ್ಧ ಅನುಮಾನ ಇರುವುದಾಗಿ ಆರೋಪಿಸಿರುವ ರಾಜೇಶ್ವರಿ, ಗೋವಿಂದರಾಜ ನಗರ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ

ದೂರುದಾರೆ ರಾಜೇಶ್ವರಿ ಅವರಿಗೆ ಫೆಬ್ರವರಿ 8ರಂದು ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾತ್ರಿ ತಮ್ಮ ಪತಿಯೊಂದಿಗೆ ಮೂಡಲಪಾಳ್ಯದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು.

ಈ ವೇಳೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ತಪಾಸಣೆ ನಡೆಸಿ ಇಸಿಜಿ ಮಾಡಿಸಲು ಸೂಚಿಸಿದ್ದರು. ಇಸಿಜಿ ಮಾಡುವ ಮುನ್ನ ಮಾಂಗಲ್ಯ ಸರ ಬಿಚ್ಚಿ ತಮ್ಮ ಪತಿಯ ಕೈಗೆ ನೀಡಲು ರಾಜೇಶ್ವರಿ ಅವರನ್ನು ತಡೆದಿದ್ದ ನರ್ಸ್, ದಿಂಬಿನ ಕೆಳಗಿರಿಸಲು ಸೂಚಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಪಾಸಣೆ ಮುಗಿದ ನಂತರ ಸರ ಮರೆತಿದ್ದ ರಾಜೇಶ್ವರಿ ಮನೆಗೆ ತೆರಳಿದ್ದಾರೆ. ಬೆಳಗ್ಗೆ ಸ್ನಾನ ಮಾಡುವಾಗ ಮಾಂಗಲ್ಯ ಸರವನ್ನು ರಾತ್ರಿ ಆಸ್ಪತ್ರೆಯಲ್ಲಿ ಬಿಟ್ಟು ಬಂದಿರುವುದು ನೆನಪಾಗಿದೆ. ತಕ್ಷಣ ಆಸ್ಪತ್ರೆಗೆ ಹೋಗಿ ಚಿನ್ನದ ಸರದ ಬಗ್ಗೆ ವಿಚಾರಿಸಿದಾಗ, ಆಸ್ಪತ್ರೆಯವರಿಂದ ಚಿನ್ನದ ಸರ ಇಲ್ಲ ಎಂದು ಬೇಜವಾಬ್ದಾರಿ ಉತ್ತರ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News