ಬೆಂಗಳೂರು | ನಾಲ್ವರು ಡ್ರಗ್ ಪೆಡ್ಲರ್ ಗಳ ಬಂಧನ : 2.35 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ
ಬೆಂಗಳೂರು : ಡ್ರಗ್ ಪೆಡ್ಲರ್ ಗಳ ವಿರುದ್ಧ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಮೂವರು ವಿದೇಶಿ ಡ್ರಗ್ ಪೆಡ್ಲರ್ ಗಳು ಸೇರಿದಂತೆ ನಾಲ್ವರನ್ನು ಬಂಧಿಸಿ, ಒಟ್ಟು 2.35 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ಜಪ್ತಿ ಮಾಡಿರುವುದಾಗಿ ವರದಿಯಾಗಿದೆ.
ಘಾನಾ ಮೂಲದ ಇಮ್ಯಾನ್ಯುಲ್ ಕ್ವಾಸಿ(32), ನೈಜೀರಿಯಾ ಮೂಲದ ಚೈನಸಾ ಸಿಪ್ರಿಲಾನ್ ಒಕೋಯ್(38) ಹಾಗೂ ಕಲು ಚುಕ್ವಾ(40) ಎಂಬಾತನ ಸಹಿತ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 2.35 ಕೋಟಿ ರೂ. ಮೌಲ್ಯದ 730 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, 1273 ಎಕ್ಸ್ಟಸಿ ಪಿಲ್ಸ್, 42 ಗ್ರಾಂ ಹೈಡೋಗಾಂಜಾ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ 4 ಮೊಬೈಲ್ ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಬಂಧಿತ ಆರೋಪಿಗಳು ಪ್ರವಾಸಿ ವೀಸಾ, ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದು, ಪರಿಚಯಸ್ಥ ಗಿರಾಕಿಗಳಿಗೆ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದರು. ಈ ಪೈಕಿ ಓರ್ವ ಆರೋಪಿಯು ಈ ಹಿಂದೆ ಮುಂಬೈನಲ್ಲಿ ನೆಲೆಸಿದ್ದು, ಮಾದಕ ಪದಾರ್ಥಗಳ ಮಾರಾಟ ಪ್ರಕರಣದಲ್ಲಿ ಸೆರೆವಾಸ ಸಹ ಅನುಭವಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಆರೋಪಿಯು ಸ್ಥಳೀಯನಾಗಿದ್ದು, ಪೋಸ್ಟ್ ಮೂಲಕ ಹೈಡೋಗಾಂಜಾವನ್ನು ತರಿಸಿಕೊಳ್ಳುತ್ತಿದ್ದನು. ಆರೋಪಿಯ ಕುರಿತು ಖಚಿತ ಮಾಹಿತಿಯ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.