ಬೆಂಗಳೂರು | ಕೇಕ್ ತಿಂದು ಮಗು ಮೃತ್ಯು : ತಂದೆ-ತಾಯಿ ಅಸ್ವಸ್ಥ
ಬೆಂಗಳೂರು : ಕೇಕ್ ತಿಂದು ಅಸ್ವಸ್ಥಗೊಂಡಿದ್ದ ಒಂದೇ ಕುಟುಂಬದ ಮೂವರಲ್ಲಿ 5 ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ ಇಲ್ಲಿನ ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಸೋಮವಾರ ವರದಿಯಾಗಿದೆ.
ಮೃತಪಟ್ಟ ಮಗುವನ್ನು ಧೀರಜ್(5) ಎಂದು ಗುರುತಿಸಲಾಗಿದೆ. ಮಗುವಿನ ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮಿ ಅಸ್ವಸ್ಥಗೊಂಡಿದ್ದು, ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಫುಡ್ ಡೆಲಿವರಿ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿರುವ ಬಾಲರಾಜ್, ಮೂರು ದಿನಗಳ ಹಿಂದೆ ಗ್ರಾಹಕರೊಬ್ಬರು ಆರ್ಡರ್ ಮಾಡಿ ಕ್ಯಾನ್ಸಲ್ ಮಾಡಿದ್ದ ಕೇಕ್ ಅನ್ನು ಮನೆಗೆ ತಂದು ಫ್ರಿಡ್ಜ್ ನಲ್ಲಿಟ್ಟಿದ್ದರು. ಅ.6ರ ರವಿವಾರದಂದು ಊಟವಾದ ಬಳಿಕ ಕೇಕ್ ತಿಂದಿದ್ದಾರೆ. ಬಳಿಕ ಇದ್ದಕ್ಕಿದ್ದಂತೆ ಮೂವರೂ ಅಸ್ವಸ್ಥಗೊಂಡಿದ್ದು, ಅಕ್ಕ-ಪಕ್ಕದವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೇಕ್ ತಿಂದಿದ್ದರಿಂದಲೇ ಅಸ್ವಸ್ಥರಾಗಿದ್ದಾರಾ? ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದಾರಾ? ಎಂಬುದರ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ನಿಖರ ಕಾರಣ ಗೊತ್ತಾಗಲಿದೆ. ಈ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕೆ.ಪಿ.ಅಗ್ರಹಾರ ಠಾಣಾ ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಆಂಜಿನಪ್ಪ, ದಂಪತಿ ಹಾಗೂ ಮಗುವನ್ನು ಸೋಮವಾರ ಬೆಳಗಿನ ಜಾವ ಆಸ್ಪತ್ರೆಗೆ ಕರೆತರಲಾಗಿತ್ತು. ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮೀ ಇಬ್ಬರೂ ತೀವ್ರವಾಗಿ ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ಬರುವ ಮುನ್ನವೇ ಮಗು ಧೀರಜ್ ಮೃತಪಟ್ಟಿದ್ದಾನೆ. ದಂಪತಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇನ್ನು ಮೂವರಿಗೂ ಪುಡ್ ಪಾಯ್ಸನ್ ಆಗಿರುವುದು ಖಚಿತವಾಗಿದೆ. ಆದರೆ, ಕೇಕ್‍ನಿಂದಲೋ ಅಥವಾ ಊಟದಿಂದಲೋ ಎಂಬುದು ಮೃತ ಮಗುವಿನ ಮರಣೋತ್ತರ ಪರೀಕ್ಷಾ ವರದಿ ಬಂದ ನಂತರದಲ್ಲಿ ತಿಳಿಯಲಿದೆ ಎಂದು ಹೇಳಿದ್ದಾರೆ.