ಬೆಂಗಳೂರು | ದಲಿತ ಪ್ರಾಧ್ಯಾಪಕರಿಗೆ ಕಿರುಕುಳ ಆರೋಪ: ಆಡಳಿತ ಮಂಡಳಿ ವಿರುದ್ಧ ಧರಣಿ ಎಚ್ಚರಿಕೆ

Update: 2024-02-02 15:43 GMT

ಬೆಂಗಳೂರು: ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದ ದಲಿತ ಸಮುದಾಯದ ಪ್ರಾಧ್ಯಾಪಕರೊಬ್ಬರನ್ನು ಪದವಿ ಪೂರ್ವ(ಪಿಯು)ಕಾಲೇಜಿಗೆ ಹಿಂಭಡ್ತಿ ನೀಡಿ, ವರ್ಗಾವಣೆ ಮಾಡುವ ಮೂಲಕ ಅಪಮಾನ ಮಾಡಿದ್ದಲ್ಲದೆ, ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ‘ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ’ಯ ವಿರುದ್ಧ ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬಸವನಗುಡಿ ನ್ಯಾಷನಲ್ ಕಾಲೇಜಿಗೆ ತೆರಳಿದ ದಸಂಸ(ಅಂಬೇಡ್ಕರ್ ವಾದ)ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಚಿಂತಕರಾದ ಶ್ರೀಪಾದ್ ಭಟ್, ಡಾ.ಬಂಜಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ತೆರಳಿದ ವಿವಿಧ ಸಂಘಟನೆಗಳ ಮುಖಂಡರು, ದಲಿತ ಸಮುದಾಯದ ಪ್ರಾಧ್ಯಾಪಕರನ್ನು ಅದೆ ಹುದ್ದೆಯಲ್ಲೇ ಮುಂದುವರಿಸಬೇಕು. ಅಲ್ಲದೆ, ಕಿರುಕುಳ ನಿಲ್ಲಿಸಬೇಕು. ಇಲ್ಲವಾದರೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಿರುಕುಳ: ‘13 ವರ್ಷದಿಂದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ರವಿಕುಮಾರ್ ಭಾಗಿ ಅವರನ್ನು ಪದವಿ ಕಾಲೇಜಿನಿಂದ ಪಿಯು ಕಾಲೇಜಿಗೆ ಹಿಂಭಡ್ತಿ ನೀಡಲಾಗಿದೆ. ಅಲ್ಲದೆ, ಬೆಂಗಳೂರು ವಿವಿ ಸಂಶೋಧನಾ ಮಾರ್ಗದರ್ಶಕರಾಗಲು ಸೇವಾ ಧೃಢೀಕರಣ ಪತ್ರವನ್ನು ಕಾಲೇಜಿನ ಪ್ರಾಂಶುಪಾಲರು ನೀಡುತ್ತಿಲ್ಲ’ ಎಂದು ಆರೋಪಿಸಲಾಗಿದೆ.

ಈ ವೇಳೆ ಮಾತನಾಡಿದ ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ‘ವೈಚಾರಿಕ ಚಿಂತಕ ಡಾ. ಎಚ್.ನರಸಿಂಹಯ್ಯ ಅವರು ಒಳ್ಳೆಯ ಉದ್ದೇಶದಿಂದ ಕಟ್ಟಿದ ನ್ಯಾಷನಲ್ ಕಾಲೇಜಿನಲ್ಲಿ ದಲಿತ ಸಮುದಾಯದ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಕೂಡಲೇ ಪ್ರಾಧ್ಯಾಪಕ ಡಾ.ರವಿಕುಮಾರ್ ಬಾಗಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

‘ಯಾವುದೇ ಕಾರಣವೇ ಇಲ್ಲದ ನನಗೆ ಕಾಲೇಜಿನ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ದಲಿತ ಮುಖಂಡರ ಗಮನಕ್ಕೆ ತಂದಿದ್ದೆ. ಇದೇ ರೀತಿ ಹಲವರಿಗೆ ಕಿರುಕುಳ ನೀಡಿ ಕಾಲೇಜಿನಿಂದ ಹೊರಹೋಗುವಂತೆ ಮಾಡಿದ್ದಾರೆ. ಹೀಗಾಗಿ ನನಗೆ ಆದ ಅನ್ಯಾಯ ಬೇರೆಯವರಿಗೆ ಆಗಬಾರದು. ನನಗೆ ಅದೇ ಹುದ್ದೆಯಲ್ಲಿ ಮುಂದುವರಿಸಬೇಕು’ ಎಂದು ದಲಿತ ಸಮುದಾಯದ ಪ್ರಾಧ್ಯಾಪಕ ಡಾ.ರವಿಕುಮಾರ್ ಬಾಗಿ ಒತ್ತಾಯಿಸಿದರು. ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ಫೆ.5ಕ್ಕೆ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡುವ ಭರವಸೆ ನೀಡಿದೆ ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News