ಬೆಂಗಳೂರು | ಪ್ಲಾಸ್ಟಿಕ್ ಡ್ರಮ್‍ನಲ್ಲಿ ವೃದ್ಧೆಯ ಮೃತದೇಹ ಪತ್ತೆ ಪ್ರಕರಣ: ಇಬ್ಬರು ವಶಕ್ಕೆ

Update: 2024-02-26 15:14 GMT

ಬೆಂಗಳೂರು : ಇಲ್ಲಿನ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ದೆಯೊಬ್ಬರ ಕೈ, ಕಾಲು ಕತ್ತರಿಸಿ ಹತ್ಯೆ ಮಾಡಿರುವ ದುಷ್ಕರ್ಮಿಗಳು, ಶವವನ್ನು ಪ್ಲಾಸ್ಟಿಕ್ ಡ್ರಮ್‍ನಲ್ಲಿ ತುಂಬಿ ಬೀದಿಗೆ ಬಿಸಾಡಿ ಪರಾರಿಯಾಗಿರುವ ಪ್ರಕರಣ ನಡೆದಿದ್ದು, ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಮೃತರನ್ನು ಸುಶೀಲಮ್ಮ(70) ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ.26ರ ಸಂಜೆ 5 ಗಂಟೆ ಸುಮಾರಿಗೆ ಡ್ರಮ್‍ನಿಂದ ದುರ್ವಾಸನೆ ಬರಲಾರಂಭಿಸಿದ ಹಿನ್ನೆಲೆಯಲ್ಲಿ ಸಮೀಪದ ನಿವಾಸಿಗಳು ಅದನ್ನು ಪರಿಶೀಲಿಸಿದಾಗ ದೇಹದ ಮೇಲ್ಭಾಗವು ಹಾಗೇ ಇದ್ದು, ಕೈಗಳು ಮತ್ತು ಕಾಲುಗಳನ್ನು ನಿಖರವಾಗಿ ಕತ್ತರಿಸಲ್ಪಟ್ಟಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆ.24ರ ಶನಿವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ವೃದ್ಧೆಯನ್ನು ಕೊಲೆ ಮಾಡಲಾಗಿದೆ. ಕೆ.ಆರ್.ಪುರಂನ ನಿಸರ್ಗ ಲೇಔಟ್‍ನಲ್ಲಿರುವ ತಮ್ಮ ಮನೆಯಲ್ಲಿ ಶನಿವಾರ ಬೆಳಗ್ಗೆ ಸುಶೀಲಮ್ಮ ತಮ್ಮ ಮೊಮ್ಮಗಳೊಂದಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಅನಂತರದಲ್ಲಿ ಸುಶೀಲಮ್ಮ ಅವರ ಕೊಲೆಯಾಗಿದೆ. ಹಣಕ್ಕಾಗಿ ಈ ಕೃತ್ಯವನ್ನು ನಡೆಸಿರುವ ಶಂಕೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಆದರೆ, ಈ ಹಂತದವರೆಗೆ ಯಾವುದೇ ರೀತಿಯ ಖಚಿತ ಮಾಹಿತಿ ದೊರೆತಿಲ್ಲ. ಈ ಬಗ್ಗೆ ವಿಶೇಷ ತಂಡವನ್ನು ರಚಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News