ಬೆಂಗಳೂರು | ಪರವಾನಗಿ ಪಡೆಯದೆ ದ್ವಿಚಕ್ರ ವಾಹನ ಚಾಲನೆ: 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರಿಗೆ ದಂಡ

Update: 2024-02-02 12:47 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಚಾಲನಾ ಪರವಾನಗಿ ಹೊಂದದೆ ಹಾಗೂ 18 ವರ್ಷವಾಗದ ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಚಲಾಯಿಸಿರುವ ಪ್ರಕರಣ ಸಂಬಂಧ, 1,500ಕ್ಕೂ ಹೆಚ್ಚು ಶಾಲಾ, ಕಾಲೇಜಿನ ವಿದ್ಯಾರ್ಥಿಗಳ ಪೋಷಕರಿಗೆ ದಂಡ ಹಾಕಿರುವುದಾಗಿ ನಗರ ದಕ್ಷಿಣ ವಿಭಾಗ ಸಂಚಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

ಶುಕ್ರವಾರ ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 18 ವರ್ಷವಾಗದ ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಚಲಾಯಿಸುವ ಸಂಖ್ಯೆ ಹೆಚ್ಚಾಗಿದೆ. ಈ ಮೂಲಕ ಅಪಘಾತ ಪ್ರಮಾಣ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ನಗರ ಸಂಚಾರ ಪೊಲೀಸರಿಂದ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ದಂಡ ವಿಧಿಸಿ ದ್ವಿಚಕ್ರ ವಾಹನ ನೀಡದಂತೆ ತಾಕೀತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಮಕ್ಕಳು ಶಾಲಾ-ಕಾಲೇಜುಗಳಿಗೆ ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಬರುತ್ತಿದ್ದಾರೆ. ಈ ಸಂಖ್ಯೆ ವಿಪರೀತವಾದಂತೆ ಟ್ರಾಫಿಕ್ ಪೊಲೀಸರು ಎಚ್ಚೆತ್ತುಕೊಂಡು ನಗರದ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಘಟನೆಗಳು ಮರುಕಳಿಸಿದರೆ ಪ್ರಕರಣ ದಾಖಲಿಸುವುದಾಗಿಯೂ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಶಾಲೆಗಳಿಂದ ಪ್ರಕಟನೆ ಹೊರಡಿಸಲು ಸೂಚಿಸಲಾಗಿದ್ದು, ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಇದಕ್ಕೆ ಭರವಸೆ ನೀಡಿವೆ ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News