ಬೆಂಗಳೂರು | ಗಾಂಜಾ ನೀಡುವ ನೆಪದಲ್ಲಿ ಹಣ ಸುಲಿಗೆ : 6 ಮಂದಿಯ ಬಂಧನ

Update: 2024-02-25 13:15 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಆಗಿದ್ದ ವ್ಯಕ್ತಿಗೆ ಮಾದಕ ವಸ್ತು ಗಾಂಜಾ ಕೊಡುವುದಾಗಿ ನಂಬಿಸಿ ಹಲ್ಲೆಗೈದು ಹಣ ಸುಲಿಗೆ ಮಾಡಿದ್ದ 6 ಮಂದಿ ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಬಂಧಿಸಿರುವುದು ವರದಿಯಾಗಿದೆ.

ಬೊಮ್ಮನಹಳ್ಳಿ ನಿವಾಸಿ ಅಮಿತ್ ರಾಣಾ ಅವರ ಸಹೋದರ ಆಸ್ಟ್ರೇಲಿಯಾ ಪ್ರಜೆಯಾಗಿದ್ದ ಅಲೋಕ್ ರಾಣಾ ಎಂಬವರನ್ನು ಅಪಹರಿಸಿ, ಹಣ ಸುಲಿಗೆ ಮಾಡಿದ್ದ ತಮಿಳುನಾಡು ಮೂಲದ ಮೋನಿಷ್‌, ಲೊಕೇಶ್, ಕಿಶೋರ್, ರವಿ, ದಿಲೀಪ್ ಹಾಗೂ ಸತೀಶ್ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಅಪಹರಣಕ್ಕೊಳಗಾದ ಅಲೋಕ್ ರಾಣಾ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಸಹೋದರನನ್ನು ನೋಡಲು ಬೆಂಗಳೂರು ಬಂದಿದ್ದರು. ಗಾಂಜಾ ಸೇವನೆಗೆ ಜೋತುಬಿದ್ದಿದ್ದ ಅಲೋಕ್ ರಾಣಾ ಡಾರ್ಕ್ ವೆಬ್ ಮೂಲಕ ಆರೋಪಿ ಮೋನಿಷ್ ನನ್ನು ಸಂಪರ್ಕಿಸಿದ್ದರು. ಹಲವು ಬಾರಿ ಮಾದಕ ದ್ರವ್ಯವನ್ನೂ ಖರೀದಿಸಿದ್ದರು. ನಿರಂತರ ಖರೀದಿ ಹಿನ್ನೆಲೆಯಲ್ಲಿ ಶ್ರೀಮಂತ ವ್ಯಕ್ತಿಯೆಂದು ಭಾವಿಸಿ ಹಣಕ್ಕಾಗಿ ಮೊನೀಷ್ ಹಾಗೂ ಆತನ ಸಹಚರರು ಸುಲಿಗೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.

ಡ್ರಗ್ಸ್ ವ್ಯವಹಾರ ಸಂಬಂಧ ಫೆ.5ರಂದು ಆರೋಪಿಗಳು ಅಲೋಕ್ ರಾಣಾನನ್ನು ಭೇಟಿ ಮಾಡಿದ್ದರು. ಪೂರ್ವಯೋಜಿತ ಸಂಚಿನಂತೆ ಆತನನ್ನು ಬೆದರಿಸಿದ ಆರೋಪಿಗಳು ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ದಾರೆ. ಅಲೋಕ್ ರಾಣಾ ಅವರ ಮೊಬೈಲ್‍ನಿಂದ 98 ಸಾವಿರ ರೂ ವರ್ಗಾಯಿಸಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಅಲೋಕ್ ರಾಣಾ ಸಹೋದರ ಅಮಿತ್‍ಗೆ ಕರೆ ಮಾಡಿಸಿ 40 ಸಾವಿರ ರೂ. ಹಣ ಹಾಕಿಸಿಕೊಂಡಿದ್ದಾರೆ. ಇಷ್ಟಕ್ಕೆ ತೃಪ್ತರಾಗದ ಆರೋಪಿಗಳು, ಇನ್ನೂ ಹೆಚ್ಚು ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ ಅಲೋಕ್ ರಾಣಾ ಕಾರ್ ನಲ್ಲಿ ಅಳವಡಿಸಿದ್ದ ಜಿಪಿಎಸ್ ಆಧಾರದ ಮೇರೆಗೆ ಅಮಿತ್ ಸ್ಥಳಕ್ಕೆ ಹೋದಾಗ ಆರೋಪಿಗಳೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ತಡವಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ 24 ಗಂಟೆ ಅಂತರದಲ್ಲಿ ಆರು ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News