ಬೆಂಗಳೂರು : ಹೃದ್ರೋಗ ತಜ್ಞ ಮಂಜುನಾಥ್ ಅವರಿಗೆ ಬೀಳ್ಕೊಡುಗೆ
ಬೆಂಗಳೂರು: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರ ಸೇವಾವಧಿ ಇಂದಿಗೆ ಮುಕ್ತಾಯವಾಗಿದ್ದು, ಜಯದೇವ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಭಾವಪೂರ್ಣವಾಗಿ ಬೀಳ್ಕೊಡುಗೆ ನೀಡುವಾಗ ಆಸ್ಪತ್ರೆಯ ಸಿಬ್ಬಂದಿ ಕಣ್ಣೀರು ಹಾಕಿದರು.
ಸೇವಾವಧಿ ಬುಧವಾರ ಅಂತ್ಯವಾದ ಹಿನ್ನೆಲೆ ಜಯನಗರ ಶಾಸಕ ರಾಮಮೂರ್ತಿ ಸೇರಿದಂತೆ ಹಲವಾರು ಗಣ್ಯರು ಡಾ. ಮಂಜುನಾಥ್ ಅವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜಯದೇವ ಆಸ್ಪತ್ರೆಯ ಹಿರಿಯ ವೈದ್ಯರು, ಕಚೇರಿ ಸಿಬ್ಬಂದಿ ಕಣ್ಣೀರು ಹಾಕಿ ಅಪ್ಪಿಕೊಂಡು ಭಾವುಕರಾದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ.ಸಿ.ಎನ್.ಮಂಜುನಾಥ್, ನಾನು ಇಲ್ಲಿಗೆ ಬಂದಾಗ ಕೇವಲ 300 ಹಾಸಿಗೆಗಳ ವ್ಯವಸ್ಥೆ ಇತ್ತು. ಆದರೆ, ಇದೀಗ 2 ಸಾವಿರ ಹಾಸಿಗೆಗಳು ಜತೆಗೆ 2,500 ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಣ್ಣ ಸಣ್ಣ ಬದಲಾವಣೆಯನ್ನು ತರುವ ಮೂಲಕ ಆಸ್ಪತ್ರೆಯನ್ನು ವಿಶ್ವ ದರ್ಜೆಗೆ ಏರಿಸಿದ್ದೇವೆ ಎಂದರು.
ಶುಚಿತ್ವಕ್ಕೆ ಸಾಕಷ್ಟು ಪ್ರಾಮುಖ್ಯತೆ ಕೊಟ್ಟಿದ್ದೇವೆ. ಪ್ರತಿದಿನವೂ ಹೊಸದನ್ನು ತರುವುದರ ಮೂಲಕ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶ್ರಮಿಸಿದ್ದೇವೆ. ಇದರಲ್ಲಿ ನಮ್ಮ ಸಿಬ್ಬಂದಿ ಪಾತ್ರ ಬಹಳಷ್ಟಿದೆ. ಇಲ್ಲಿ ಇರುವಷ್ಟು ತಜ್ಞ ವೈದ್ಯರು, ದೊಡ್ಡ ತರಬೇತಿ ಕೇಂದ್ರ ದೇಶದ ಯಾವುದೇ ಆಸ್ಪತ್ರೆಯಲ್ಲಿ ಇಲ್ಲ. ರೋಗಿಗಳ ಬಳಿ ಅಭಿಪ್ರಾಯವನ್ನು ಅವರ ಮನೆಗೆ ಹೋಗಿ ಸಂಗ್ರಹಿಸುವ ವಿನೂತನ ಕೆಲಸ ಕೂಡ ಆಸ್ಪತ್ರೆಯಿಂದ ನಡೆಯುತ್ತಿದೆ ಎಂದು ನುಡಿದರು.
ಇಲ್ಲಿಯವರೆಗೆ ಬಂದ ಎಲ್ಲ ರಾಜ್ಯ ಸರಕಾರಗಳು ಜಯದೇವ ಆಸ್ಪತ್ರೆಗೆ ಸಾಕಷ್ಟು ಸಹಕಾರವನ್ನು, ಕೊಡುಗೆಗಳನ್ನು ನೀಡಿವೆ. ದಾನಿಗಳ ನೆರವು ಸಹ ಆಸ್ಪತ್ರೆಗಿದೆ. ಸುಧಾಮೂರ್ತಿ, ನಾರಾಯಣಮೂರ್ತಿ, ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವರು ಎಂದೂ ನಮ್ಮ ಜೊತೆ ನಿಂತಿದ್ದಾರೆ. ಇವರೆಲ್ಲರಿಗೂ ಆಭಾರಿಯಾಗಿದ್ದೇನೆ. ಆಯುಷ್ಮಾನ್ ಭಾರತ ರೋಗಿಗಳಿಗೆ ನೆರವಾಗುತ್ತಿದೆ. ಆದರೆ ಅದನ್ನು ಇನ್ನೂ ಉತ್ತಮ ರೀತಿಯಲ್ಲಿ ತರಲು ಸರಕಾರ ಪರಾಮರ್ಶೆ ನಡೆಸುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಹ ಜಯದೇವ ಆಸ್ಪತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏಮ್ಸ್ ಸಂಸ್ಧೆ ನಮ್ಮ ಮಾಡೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹೊಸದಿಲ್ಲಿಯಲ್ಲಿ ಈ ವ್ಯವಸ್ಥೆ ತರಲು ಹೊರಟಿದೆ. ಇದೇ ಮಾದರಿಯಲ್ಲಿ ಇನ್ನಷ್ಟು ಸರಕಾರಿ ಆಸ್ಪತ್ರೆಗಳಿಗೆ ಇನ್ನೂ ಉತ್ತಮ ಮುಂದಾಳತ್ವದ ಅವಶ್ಯಕತೆ ಇದೆ ಎಂದು ಹೇಳಿದರು.
2005 ರಲ್ಲಿ ಆಸ್ಪತ್ರೆ ತ್ಯಜಿಸುವ ಮನಸ್ಸು ಮಾಡಿದ್ದೆ. ಆಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನನ್ನನ್ನು ಇಲ್ಲಿಯೇ ಕೆಲಸ ಮಾಡುವಂತೆ ಸೂಚಿಸಿದ್ದರು. ದೊಡ್ಡವರ ಮಾತು ಕೇಳಿದರೆ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಇಂದು ದೇವೇಗೌಡರ ಮಾತು ಸಾಕ್ಷಿಯಾಗಿದೆ. ನಮ್ಮ ನೋವು ನಮಗೆ ಗೊತ್ತಾದರೆ ಜೀವಂತವಾಗಿದ್ದೀವಿ ಎಂದರ್ಥ. ಅದೇ ಬೇರೆಯವರ ನೋವು ನಮಗೆ ತಿಳಿದರೆ ಮನುಷ್ಯರಾಗಿದ್ದೇವೆ ಎಂದು ಅರ್ಥ ಎಂದು ಅವರು ಭಾವುಕರಾದರು.