ಬೆಂಗಳೂರು| ಮಲ್ಲೇಶ್ವರ ಕಡಲೆಕಾಯಿ ಪರಿಷೆ ಆರಂಭ

Update: 2023-12-02 14:13 GMT

ಬೆಂಗಳೂರು: ಕಾರ್ತಿಕ ಮಾಸದ ಅಂಗವಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಇಂದಿನಿಂದ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಾಗಿದ್ದು, ರಾಜ್ಯದ ಮೂಲೆ ಮೂಲೆಯಿಂದ ವಿವಿಧ ಬಗೆಯ ಕಡಲೆಕಾಯಿಗಳು ನೋಡುಗರ ಗಮನ ಸೆಳೆಯುತ್ತಿದೆ.

ಕಾಡುಮಲ್ಲೇಶ್ವರ ಗೆಳೆಯರ ಬಳಗವು ಮುಜರಾಯಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿರುವ ಗಂಗಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಪರಿಷೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ, ಶಾಸಕ ಮುನಿರತ್ನ ಸೇರಿದಂತೆ ಪ್ರಮುಖರು ಚಾಲನೆ ನೀಡಿದರು.

ಇನ್ನೂ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ತುಮಕೂರು, ಕನಕಪುರ ಜಿಲ್ಲೆಯ ರೈತರು ಸೇರಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರು ಭಾಗಿಯಾಗಿದ್ದು, ಸಾರ್ವಜನಿಕರು ವಿವಿಧ ವಸ್ತುಗಳು, ತಿಂಡಿ ತಿನಿಸು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಈ ಕುರಿತು ಮಾತನಾಡಿದ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ನಗರದ ಜನರಿಗೆ ಗ್ರಾಮೀಣ ಸಂಸ್ಕತಿ, ಜೀವನ ಪದ್ಧತಿಯನ್ನು ಪರಿಚಯಿಸಲು ಕಾರ್ತಿಕ ಮಾಸದಲ್ಲಿ ಮೂರು ದಿನ ಕಡಲೆಕಾಯಿ ಪರಿಷೆ ಹಮ್ಮಿಕೊಳ್ಳಲಾಗಿದೆ. ಜತೆಗೆ, 20 ಅಡಿ ಅಗಲ, 22 ಅಡಿ ಎತ್ತರದ ನಂದಿ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, 800 ಕೆ.ಜಿ. ಕಡಲೆಕಾಯಿಗಳಿಂದ ಅಲಂಕಾರ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಪರಿಷೆಯಾಗಬೇಕೆಂಬ ಉದ್ದೇಶದಿಂದ 'ಮನೆಯಿಂದ ಕೈಚೀಲ ತನ್ನಿ' ಎಂಬ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ಪರಿಷೆಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ತುಮಕೂರು, ಕನಕಪುರ ಜಿಲ್ಲೆಯ ರೈತರು ಸೇರಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರು ಭಾಗಿಯಾಗಿದ್ದಾರೆ. ರೈತರು ಬೆಳೆದ ಕಡಲೆಕಾಯಿ ಮತ್ತು ತರಕಾರಿ ಕರಕುಶಲ ವಸ್ತುಗಳ ಮಾರಾಟಕ್ಕಾಗಿ 300 ಮಳಿಗೆಗಳನ್ನು ಉಚಿತವಾಗಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಬೆಲೆ ದುಪ್ಪಟ್ಟು: ಈ ಬಾರಿ ಮಳೆಯಿಲ್ಲದೆ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಸೇರಿದಂತೆ ಎಲ್ಲಿಯೂ ಕಡ್ಲೆಕಾಯಿ ಬೆಳೆ ಸರಿಯಾಗಿ ಬಂದಿಲ್ಲ. ಹೀಗಾಗಿ ಬೆಲೆಗಳು ದುಬಾರಿಯಾಗಿವೆ. ಒಂದು ಸೇರು ಹಸಿ ಕಾಯಿಗೆ 35-45 ರೂ. ದರ ನಿಗದಿಯಾಗಿದ್ದು, ಕಳೆದ ವರ್ಷ 20 ರೂ.ಗೆ ಸಿಗುತ್ತಿತ್ತು.

ಯಾವಾವ ಕಡಲೆಕಾಯಿ?: ನಾಟಿ, ಮರಲು, ಬೆಳ್ಳಿಕಾಯಿ, ಗಡಂಗ್, ಕೆಂಪುಗಡಲೆ, ಕಪ್ಪುಕಡಲೆ, ದೊಡ್ಡ ಗಾತ್ರದ ಬೋಂಡಾ ಕಡಲೆಕಾಯಿ ರಾಶಿಗಳು ರಸ್ತೆಯ ಎರಡು ಬದಿಯಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News