ಬೆಂಗಳೂರು| ನಗರ್ತಪೇಟೆ ಗಲಾಟೆ ಪ್ರಕರಣ : ಅಂಗಡಿಯ ಮಾಲಕನ ವಿರುದ್ಧವೂ ಎಫ್‍ಐಆರ್ ದಾಖಲು

Update: 2024-04-05 13:06 GMT

ಬೆಂಗಳೂರು : ಇಲ್ಲಿನ ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಹಾಕಲಾಗಿದ್ದ ಲೌಡ್‍ಸ್ಪೀಕರ್ ಶಬ್ದ ಜಾಸ್ತಿಯಾಯಿತು ಎಂಬ ವಿಚಾರಕ್ಕಾಗಿ ಮಾಲಕನ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‍ಐಆರ್ ದಾಖಲಾಗಿದೆ.

ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿರುವ ಕೃಷ್ಣಾ ಟೆಲಿಕಾಂ ಅಂಗಡಿಯ ಮಾಲಕ ಹಾಗೂ ಹಲ್ಲೆಗೊಳಗಾದ ಮುಖೇಶ್ ಎಂಬುವನ ವಿರುದ್ಧ ಬಂಧಿತ ಆರೋಪಿ ಸುಲೇಮಾನ್ ತಂದೆ ಜಬೀನ್ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಈ ಸಂಬಂಧ ನ್ಯಾಯಾಲಯದ ಸೂಚನೆ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?: ರಮಝಾನ್ ಹಿನ್ನೆಲೆಯಲ್ಲಿ ಸಿದ್ದಣ್ಣ ಗಲ್ಲಿಯಲ್ಲಿರುವ ಜುಮ್ಮಾ ಮಸೀದಿಗೆ ಪುತ್ರ ಸುಲೇಮಾನ್ ಹಾಗೂ ಸಹಚರರೊಂದಿಗೆ ಪ್ರಾರ್ಥನೆಗೆ ಹೋಗುವಾಗ ಕೃಷ್ಣಾ ಟೆಲಿಕಾಂ ಅಂಗಡಿಯಲ್ಲಿ ಕಳೆದ ಮೂರು ದಿನಗಳಿಂದ ಜೋರಾಗಿ ಮ್ಯೂಸಿಕ್ ಸಿಸ್ಟಂ ಹಾಡನ್ನು ಹಾಕಿರುವ ಬಗ್ಗೆ ಪ್ರಶ್ನಿಸಿದ್ದಾರೆ. 

ರಮಝಾನ್ ಹಿನ್ನೆಲೆಯಲ್ಲಿ ಪ್ರತಿದಿನ ಸುಮಾರು 3 ಸಾವಿರ ಮಂದಿ ಪ್ರಾರ್ಥನೆಗಾಗಿ ಈ ರಸ್ತೆಗೆ ಬರುತ್ತಾರೆ. ಇದರಿಂದ ಅವರಿಗೆಲ್ಲ ತೊಂದರೆಯಾಗಲಿದೆ ಎಂದು ಹೇಳಿದಾಗ ಏಕಾಏಕಿ ಮುಖೇಶ್, ಸುಲೇಮಾನ್ ಹಾಗೂ ಸಹಚರರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮುಖೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಘಟನೆ ವಿವರ: ಮಾ.17ರಂದು ಅಂಗಡಿಯಲ್ಲಿ ಜೋರಾಗಿ ಮ್ಯೂಸಿಕ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು, ಮುಖೇಶ್ ಮೇಲೆ ಹಲ್ಲೆ ಮಾಡಿದ ಆರೋಪದಡಿ ಸುಲೇಮಾನ್, ಶಹವಾಜ್, ತರುಣ್, ರೋಹಿತ್ ಸೇರಿ ಹಲವರನ್ನು ಬಂಧಿಸಲಾಗಿತ್ತು. ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಬಳಿಕ ಅಂಗಡಿ ಮಾಲಕನಿಗೆ ಹಲ್ಲೆ ಖಂಡಿಸಿ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಹಾಗೂ ಪಿ.ಸಿ.ಮೋಹನ್ ನೇತೃತ್ವದ ಬಿಜೆಪಿ ನಿಯೋಗ ಸ್ಥಳದಲ್ಲೇ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಗರ್ತಪೇಟೆಯಲ್ಲಿ ಅಂಗಡಿ-ಮುಂಗಟ್ಟು ಬಂದ್ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News