ಬೆಂಗಳೂರು | ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲೇ ಲ್ಯಾಪ್‍ಟಾಪ್ ಕಳ್ಳತನ : ಮಾಜಿ ಉದ್ಯೋಗಿ ಬಂಧನ

Update: 2024-09-17 14:34 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಕೆಲಸ ನೀಡಿದ್ದ ಕಂಪೆನಿಯಲ್ಲಿ ಲ್ಯಾಪ್‍ಟಾಪ್ ಕಳವು ಮಾಡಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ವೈಟ್ ಫೀಲ್ಡ್ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ತಮಿಳುನಾಡಿನ ಹೊಸೂರಿನ ಮುರುಗೇಶ್ ಎಂಬಾತ ಬಂಧಿತ ಆರೋಪಿ. ಈತನಿಂದ 22 ಲಕ್ಷ ರೂ. ಮೌಲ್ಯದ 50 ಲ್ಯಾಪ್‍ಟಾಪ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಿಸಿಎ ವ್ಯಾಸಂಗ ಮಾಡಿದ್ದ ಮುರುಗೇಶ್ ಫೆಬ್ರವರಿಯಲ್ಲಿ ಐಟಿಪಿಲ್ ಬಳಿಯಿರುವ ಕಂಪೆನಿಯೊಂದರಲ್ಲಿ ಸಿಸ್ಟಂ ಅಡ್ಮಿನ್ ಆಗಿ ಕೆಲಸ ಆರಂಭಿಸಿದ್ದ. ಆ.22ರಿಂದ ಕೆಲಸಕ್ಕೆ ಬಾರದೆ ಗೈರಾಗಿದ್ದ. ಅನುಮಾನಗೊಂಡ ಕಂಪೆನಿಯವರು ಪರಿಶೀಲಿಸಿದಾಗ ಆರೋಪಿ ಕೆಲಸ ನಿರ್ವಹಿಸುತ್ತಿದ್ದಾಗ ಆತನ ಸುಪರ್ದಿಯಲ್ಲಿದ್ದ ಒಟ್ಟು 57 ಲ್ಯಾಪ್‍ಟಾಪ್‍ಗಳು ನಾಪತ್ತೆಯಾಗಿರುವುದು ಕಂಡು ಬಂದಿತ್ತು. ತಕ್ಷಣ ಕಂಪೆನಿಯ ಪ್ರತಿನಿಧಿ ವೈಟ್‍ಫೀಲ್ಡ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ತಮಿಳುನಾಡಿನ ಹೊಸೂರಿನ ರಾಘವೇಂದ್ರ ಚಿತ್ರಮಂದಿರದ ಬಳಿ ಸಿಸ್ಟಂ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಸಾಲ ಮಾಡಿ ಹೊಸೂರಿನಲ್ಲಿರುವ ತನ್ನ 5 ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿದ್ದ ಆರೋಪಿಗೆ ಉತ್ತಮ ಬೆಲೆ ಸಿಗದೆ ಸಾಕಷ್ಟು ನಷ್ಟವಾಗಿತ್ತು. ಸಾಲ ತೀರಿಸಲು ಕಳ್ಳತನಕ್ಕಿಳಿದಿದ್ದ ಆರೋಪಿ ಕದ್ದ ಲ್ಯಾಪ್‍ಟಾಪ್‍ಗಳನ್ನು ರಿಪೇರಿ ಮತ್ತು ಮಾರಾಟ ಮಾಡುವ ಅಂಗಡಿಗೆ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News