32 ವಸತಿಯೇತರ ಅಂಗಡಿ-ಮುಂಗಟ್ಟುಗಳಿಗೆ ಬೀಗ ಮುದ್ರೆ ಜಡಿದ ಬಿಬಿಎಂಪಿ
ಬೆಂಗಳೂರು : ನಗರದ ಪಶ್ಚಿಮ ವಲಯ ಮತ್ತಿಕೆರೆ ಉಪವಿಭಾಗ ಯಶವಂತಪುರ ಆರ್.ಟಿ.ಒ ರಸ್ತೆಯಲ್ಲಿರುವ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರದಂದು ವಲಯ ಆಯುಕ್ತೆ ಅರ್ಚನಾ ನೇತೃತ್ವದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 32 ಮಳಿಗೆಗಳಿಗೆ ಬೀಗ ಮುದ್ರೆ ಹಾಕಲಾಯಿತು.
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ನೋಟೀಸ್‍ಗಳನ್ನು ಜಾರಿ ಮಾಡಲಾಗಿದ್ದು, ಸಾಕಷ್ಟು ಸಮಯಾವಕಾಶವನ್ನು ನೀಡಿದ್ದರೂ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಿರುವುದಿಲ್ಲ. ಈ ಕಾರಣ ಬಿಬಿಎಂಪಿ ಕಾಯ್ದೆ 2020 ಹಾಗೂ ನಿಯಮಾವಳಿಗಳನ್ವಯ, ವಾಣಿಜ್ಯೇತರ ಆಸ್ತಿಗಳಿಗೆ ಬೀಗಮುದ್ರೆ ಹಾಕುವುದರ ಮೂಲಕ ಬಾಕಿ ಆಸ್ತಿತೆರಿಗೆ ವಸೂಲಿ ಮಾಡಲಾಗುತ್ತಿದೆ.
ಮುಹಮ್ಮದ್ ಷರೀಫ್ ಎಜುಕೇಷನ್ ಟ್ರಸ್ಟ್ ಸಂಸ್ಥೆಗೆ ಸೇರಿದ ಸ್ವತ್ತುಗಳನ್ನು(32 ವಸತಿಯೇತರ ಅಂಗಡಿಗಳು) ವಲಯ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು, ಕಂದಾಯ ಅಧಿಕಾರಿ (ಮಲ್ಲೇಶ್ವರಂ), ಸಹಾಯಕ ಕಂದಾಯ ಅಧಿಕಾರಿ (ಮತ್ತಿಕೆರೆ) ಹಾಗೂ ಕಂದಾಯ ವಿಭಾಗದ ನೌಕರರ ಹಾಗೂ ಸಾರ್ವಜನಿಕರ ಸಮಕ್ಷಮದಲ್ಲಿ ಬೀಗಮುದ್ರೆ ಹಾಕಲಾಯಿತು.
ಸ್ವತ್ತಿನ ಮಾಲೀಕರು ಇಲ್ಲಿಯವರೆಗೆ 2016-17 ಮತ್ತು 2017-18 ನೆ ಸಾಲುಗಳಿಗೆ ಆಸ್ತಿತೆರಿಗೆ ಪಾವತಿಸಿ ಉಳಿದ ಸಾಲುಗಳಿಗೆ ಪರಿಷ್ಕರಿಸಿದ ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುತ್ತಾರೆ. 2018-19 ರಿಂದ 2023-2024 ರವರೆಗೆ ಒಟ್ಟು ರೂ. 1.51 ಕೋಟಿ ಪಾವತಿಸಬೇಕಿದೆ.