ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ : ಆರೋಪಿ ಪತ್ತೆಗೆ 300ಕ್ಕೂ ಅಧಿಕ ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆ: ಬಿ.ದಯಾನಂದ್
ಬೆಂಗಳೂರು : ರಸ್ತೆಯಲ್ಲಿ ಸಾಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಸಂಬಂಧ ಆರೋಪಿಯ ಪತ್ತೆಗಾಗಿ 300ಕ್ಕೂ ಅಧಿಕ ಸಿಸಿಟಿವಿಗಳ ದೃಶ್ಯಾವಳಿಗಳನ್ನು ವಿಶ್ಲೇಷಣೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಅವರ ನೇತೃತ್ವದಲ್ಲಿ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದರು.
ಎಪ್ರಿಲ್ 3ರಂದು ಮುಂಜಾನೆ ಸುಮಾರು 1.55ಕ್ಕೆ ಇಬ್ಬರು ಯುವತಿಯರು ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‍ನ 1ನೇ ಕ್ರಾಸ್‍ನಲ್ಲಿ ಸಾಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಏಕಾಏಕಿ ಓರ್ವ ಯುವತಿಯನ್ನು ಹಿಡಿದುಕೊಂಡು ಗೋಡೆಗೆ ಒರಗಿಸಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ಯುವತಿಯರು ಜೋರಾಗಿ ಕಿರುಚಿಕೊಂಡ ಪರಿಣಾಮ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ ಎಂದು ಬಿ.ದಯಾನಂದ್ ವಿವರಿಸಿದರು.
ಆರೋಪಿಯ ಈ ವಿಕೃತಿ ಘಟನೆ ಸ್ಥಳದ ಪಕ್ಕದಲ್ಲಿದ್ದ ಕಟ್ಟಡವೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಿರುಕುಳ ಅನುಭವಿಸಿದ ಯುವತಿಯರು ಘಟನೆ ಸಂಬಂಧ ಯಾವುದೇ ದೂರು ನೀಡಿರಲಿಲ್ಲ. ಆದರೆ, ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನನ್ವಯ ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು ಎಂದು ಬಿ.ದಯಾನಂದ್ ಮಾಹಿತಿ ನೀಡಿದರು.