ಕಾಲರಾ ಹರುಡುವಿಕೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ಸೂಚನೆ

Update: 2024-04-05 17:37 GMT

ಬೆಂಗಳೂರು : ನಗರದಲ್ಲಿ ಕಾಲರಾ ರೋಗ ಹರುಡುವಿಕೆಯನ್ನು ನಿಭಾಯಿಸಲು ಆರೋಗ್ಯಾಧಿಕಾರಿ ಹಾಗೂ ಆರೋಗ್ಯ ವೈದ್ಯಾಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಸೂಚಿಸಿದ್ದಾರೆ.

ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಬಿಬಿಎಂಪಿ ವತಿಯಿಂದ ಪ್ರತಿವಾರ್ಡ್ ಮಟ್ಟದಲ್ಲಿ ಕಾಲರಾ ಹರಡದಂತೆ  ಬಿಬಿಎಂಪಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಪಾಲಿಕೆಯ ಆರೋಗ್ಯ ತಂಡದಿಂದ ಶಂಕಿತ ಮಹಿಳೆಯು ವಾಸವಾಗಿರುವ ಸ್ಥಳದಿಂದ ಸುತ್ತಮುತ್ತಲಿನ 165 ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಸಾರ್ವಜನಿಕರಿಗೆ ಅರಿವು ಮೂಡಿಸಿ ಆರೋಗ್ಯ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದಿದ್ದಾರೆ.

165 ಮನೆಗಳಲ್ಲಿ ಯಾವುದೇ ರೀತಿಯ ಕಾಲರಾರೋಗದ ಲಕ್ಷಣಗಳು ವರದಿಯಾಗಿರುವುದಿಲ್ಲ. 10 ನೀರಿನ ಮಾದರಿಗಳನ್ನು ಸೋಂಕು ಶಂಕಿತ ಪ್ರದೇಶದಿಂದ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿರುತ್ತದೆ.

ರೋಗ ಹರುಡುವಿಕೆಯನ್ನು ನಿಭಾಯಿಸಲು ವಿಧಾನಸಭಾ ಕ್ಷೇತ್ರವಾರು/ಕ್ಷೇತ್ರ ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರಚಿಸಲು ಎಲ್ಲಾ ಆರೋಗ್ಯಾಕಾಧಿಕಾರಿಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲಾ ಹೋಟೆಲ್‍ಗಳು/ರೆಸ್ಟೋರೆಂಟ್‍ಗಳು/ಕೆಫೆಗಳ ಮಾಲೀಕರಿಗೆ, ಗ್ರಾಹಕರಿಗೆ ಕುಡಿಯಲು ಕಾಯಿಸಿದ ನೀರನ್ನು ವಿತರಿಸಲು ಸಲಹೆ ನೀಡಲಾಗಿದೆ.

ಪಾಲಿಕೆಯ ವ್ಯಾಪ್ತಿಯ ಎಲ್ಲ ಖಾಸಗಿ ಆಸ್ಪತ್ರೆ, ಖಾಸಗಿ ಲ್ಯಾಬ್‍ಗಳು ಮತ್ತು ಸರಕಾರಿ ಆಸ್ಪತ್ರೆಗಳಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕ ಆಸ್ಪತ್ರೆ, ಜನರಲ್ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಅಡಿಯಲ್ಲಿ ಬರುವ ಆಸ್ಪತ್ರೆಗಳು ಶಂಕಿತ ಪ್ರಕರಣಗಳು ವರದಿಯಾದ್ದಲ್ಲಿ ಸರ್ಕಾರ ನಿಗಪಡಿಸಿರುವ ಐ.ಎಚ್.ಐ.ಪಿ. ತಂತ್ರಾಶದಲ್ಲಿ ಕಡ್ಡಾಯವಾಗಿ ವರದಿ ಮಾಡುವಂತೆ ಸೂಚಿಸಲಾಗಿರುತ್ತದೆ.

ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಗಾಗಿ ನೀರಿನ ಮಾದರಿಗಳನ್ನು ಹಿರಿಯ ಆರೋಗ್ಯ ಪರಿವೀಕ್ಷಕರು ಸಂಗ್ರಹಿಸಿ ಲ್ಯಾಬ್‍ಗೆ ಪ್ರತಿನಿತ್ಯ ಕಳುಹಿಸಲು ಸೂಚಿಸಲಾಗಿರುತ್ತದೆ.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್‍ಎಸ್‍ಟಿ ಕಾರ್ನರ್ ಗಳನ್ನು ಸ್ಥಾಪಿಸುವ ಮೂಲಕ ಆಸ್ಪತ್ರೆಗೆ ಬರುವ ಹೊರರೋಗಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವ ಬಗ್ಗೆ ಆರೋಗ್ಯ ಶಿಕ್ಷಣ ನೀಡುವುದು ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News