ಬಾಕಿ ಹಣ ಬಿಡುಗಡೆ ಮಾಡಲು ಆಗ್ರಹಿಸಿ ಗುತ್ತಿಗೆದಾರರ ಸಂಘದ ವತಿಯಿಂದ ಧರಣಿ
ಬೆಂಗಳೂರು : ಬಿಬಿಎಂಪಿ ಮತ್ತು ಸರಕಾರ ಅನುದಾನದ ಅಡಿಯಲ್ಲಿ ನಿರ್ವಹಿಸಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ತಡೆಹಿಡಿದಿರುವ ಬಾಕಿ ಹಣ ಶೇ.25ರಷ್ಟು ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ವತಿಯಿಂದ ಫ್ರೀಡಂ ಪಾರ್ಕ್‍ನಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸಿದರು.
ಬುಧವಾರ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಸಂಘದ ಜಂಟಿ ಕಾರ್ಯದರ್ಶಿ ಬಿ.ರಂಗನಾಥ, ‘2021ರ ಎಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿರುವ ಕಾಮಗಾರಿಗಳಿಗೆ ಶೇ.25ರಷ್ಟು ಹಣ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ ಅಡಿಯಲ್ಲಿ ಕಾರ್ಯನಿರ್ವಹಿಸಿದ ಕಾಮಗಾರಿ ಕೆಲಸಗಳಿಗೆ ಶೇ.75ರಷ್ಟು ಹಣವನ್ನು ಮಾತ್ರ ಪಾವತಿ ಮಾಡಿದ್ದಾರೆ. ಇದರಲ್ಲಿ ಪೂರ್ಣ ಮೊತ್ತಕ್ಕೆ ಜಿಎಸ್‍ಟಿ ಶೆ.18ರಷ್ಟು ಮತ್ತು ಇತರೆ ಕಡಿತ ಒಳಗೊಂಡಿದ್ದು, ಶೇ.51ರಷ್ಟು ಹಣ ಮಾತ್ರ ಪಾವತಿ ಆಗುತ್ತಿದೆ. ಬಿಲ್‍ಗಳು ಸಲ್ಲಿಸಿ 3ವರ್ಷಗಳಾದರೂ ಬಿಲ್ಲಿನ ಸಂಪೂರ್ಣ ಹಣ ಗುತ್ತಿಗೆದಾರರಿಗೆ ಪಾವತಿಯಾಗದೆ ಇರುವುದರಿಂದ ಗುತ್ತಿಗೆದಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗುತ್ತಿಗೆದಾರರು ಬ್ಯಾಂಕ್ ಹಾಗೂ ಇತರ ಮೂಲಗಳಿಂದ ಸಾಲ ಮಾಡಿ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ. ನೀಡಿರುವ ಶೇ.75ರಷ್ಟು ಪಾವತಿ ಹಣದಲ್ಲಿ ಗುತ್ತಿಗೆದಾರರು ಹಾಕಿರುವ ಬಂಡವಾಳ ಹಿಂದಿರುಗಿಲ್ಲ. ಇದರಿಂದಾಗಿ ಹಲವು ಗುತ್ತಿಗೆದಾರರುಗಳು ಬ್ಯಾಂಕ್ ಬಡ್ಡಿ ಮತ್ತು ಜಿಎಸ್‍ಟಿ ಪಾವತಿಸಲು ಸಾಧ್ಯವಾಗದೆ ಸಮಸ್ಯೆಯಾಗಿದೆ. ಸರಕಾರ ಈ ಕೂಡಲೆ ಬಾಕಿ ಇರುವ ಶೇ.25ರಷ್ಟು ಮೊತ್ತವನ್ನು ನೀಡಿ ಎಂದು ಆಗ್ರಹಿಸಿದರು.
ಸತ್ಯಾಗ್ರಹದಲ್ಲಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್, ಉಪಾಧ್ಯಕ್ಷರಾದ ಚಿಕ್ಕಹೊಂಬಯ್ಯ, ಹನುಮಂತಯ್ಯ, ನಿಂಗನಗೌಡ ವಿ.ಪಾಟೀಲ್, ಎಂ.ಲಕ್ಷ್ಮಿನಾರಾಯಣ, ಎನ್. ಚೇತನ್‍ಕುಮಾರ್, ವಿ.ರವಿಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.