ದನದ ಕೆಚ್ಚಲು ಕೊಯ್ದ ಪ್ರಕರಣಕ್ಕೆ ರಾಜ್ಯ ಸರಕಾರದ ಧೋರಣೆಯೇ ಕಾರಣ: ವಿಜಯೇಂದ್ರ ಆರೋಪ
ಬೆಂಗಳೂರು: ದನದ ಕೆಚ್ಚಲು ಕೊಯ್ದ ಪ್ರಕರಣಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರದ ಧೋರಣೆಯೇ ಕಾರಣ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಕೆಚ್ಚಲು ಕೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ತಂಡವು ಇಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕಾಟನ್ ಪೇಟೆಯ ದುಂಡು ಮಾರಿಯಮ್ಮ ದೇವಸ್ಥಾನದ ಬಳಿ ಇರುವ ದನಗಳ ಮಾಲಕನ ಮನೆಗೆ ಭೇಟಿ ನೀಡಿದ್ದಲ್ಲದೆ, ಗೋಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ವಿಜಯೇಂದ್ರ ಗೋಪೂಜೆ ಮಾಡುವ ಈ ನಾಡಿನಲ್ಲಿ, ದೇಶದಲ್ಲಿ ಈ ದುರ್ಘಟನೆ ನಡೆದಿರುವುದು ಅಕ್ಷಮ್ಯ ಅಪರಾಧ. ಯಾರೋ ಬಡಪಾಯಿಯನ್ನು ತಂದು ಅವನೇ ಮಾಡಿದ್ದಾಗಿ ಬಿಂಬಿಸುವ ಪ್ರಯತ್ನ ಆಗುತ್ತಿದೆ ಎಂದು ಚರ್ಚೆ ನಡೆದಿದೆ. ಬಡ ಕುಟುಂಬದಿಂದ ಬಂದ ಹಸುವಿನ ಮಾಲಕರು ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಭೇಟಿ ಮಾಡಿ, ಗೋಪೂಜೆ ಮಾಡಿದ್ದೇವೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಕಾಂಗ್ರೆಸ್ ಸರಕಾರವು ಹಿಂದೂಗಳ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಹಿಂದೂ- ಮುಸ್ಲಿಂ ಸಮುದಾಯಕ್ಕೆ ಬೇರೆ ಬೇರೆ ನೀತಿ ಅನುಸರಿಸಿ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದು ಗೂಂಡಾಗಿರಿ ಸರಕಾರ; ತಾಲಿಬಾನ್ ಸರಕಾರ ಇಲ್ಲಿದೆ. ಮುಸಲ್ಮಾನರಿಗೆ ಏನಾದರೂ ಆಗಿದ್ದರೆ ಸಿದ್ದರಾಮಯ್ಯ ಪಂಚೆ ಎತ್ತಿಕೊಂಡು ಬರುತ್ತಿದ್ದರು ಎಂದು ಗೇಲಿ ಮಾಡಿದರು.
ಆರೋಪಿ ಮತಿಭ್ರಮಣೆಗೆ ಒಳಗಾದವ ಎಂದು ಕಾಂಗ್ರೆಸ್ಸಿಗರು ಕಥೆ ಹೆಣೆದಿದ್ದಾರೆ. ಆತ 10 ವರ್ಷಗಳಿಂದ ಅವರ ಅಣ್ಣನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಾಹಿತಿ ಇದೆ. ಆತ ಮದ್ಯಪಾನ ಮಾಡಿದ್ದರೆ ಅಷ್ಟು ಹೊತ್ತು ಬಾರ್ ತೆರೆದಿರಲು ಹೇಗೆ ಸಾಧ್ಯ? ಮುಂಜಾನೆ 3 ಅಥವಾ 4ರ ಹೊತ್ತಿಗೆ ಇಂಥ ದುಷ್ಕೃತ್ಯ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸುಮಾರು 500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಜಾಗದ ದನದ ಆಸ್ಪತ್ರೆ ಇಲ್ಲಿದೆ. ಈ ಜಾಗವನ್ನು ಸರಕಾರವು ವಕ್ಫ್ ಬೋರ್ಡಿಗೆ ನೀಡಿದೆ. ಅದರ ವಿರುದ್ಧ ಹೋರಾಟ ಮಾಡಿದವರಲ್ಲಿ ಮುಂಚೂಣಿಯಲ್ಲಿ ಕರ್ಣ ಇದ್ದು, ಕರ್ಣನ ಹಸುಗಳ ಕೆಚ್ಚಲು ಕತ್ತರಿಸುವ ಮೂಲಕ ಕರ್ಣನಿಗೂ ಎಚ್ಚರಿಕೆ ನೀಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಒಬ್ಬರೇ ಮಾಡಿದ ಕೃತ್ಯ ಇದಲ್ಲ; ಇದರ ಹಿಂದಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಸಂಸದ ಪಿ.ಸಿ. ಮೋಹನ್, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ಮುಖಂಡ ಭಾಸ್ಕರ್ ರಾವ್, ಪಕ್ಷದ ಪ್ರಮುಖರು, ಸ್ಥಳೀಯ ಮುಖಂಡರು ಈ ತಂಡದಲ್ಲಿದ್ದರು.