‘ಮನೆಗೊಂದು ಗ್ರಂಥಾಲಯ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Update: 2025-01-13 17:26 GMT

ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮನೆಗೊಂದು ಗ್ರಂಥಾಲಯ' ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದ್ದಾರೆ.

ಇದೇ ವೇಳೆ ಕುಮಾರವ್ಯಾಸ ಭಾರತ ಸಂಪುಟಗಳನ್ನು ಲೋಕಾರ್ಪಣೆ ಮಾಡಲಾಯಿತು. ‘ಮನೆಗೊಂದು ಗ್ರಂಥಾಲಯ' ಯೋಜನೆಯಡಿಯಲ್ಲಿ ಮೊದಲ ಗ್ರಂಥಾಲಯವನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿಯೇ ಸ್ಥಾಪಿಸಲಾಗಿದ್ದು, ಗ್ರಂಥಾಲಯಕ್ಕೆ ಹಿರಿಯ ಸಾಹಿತಿ, ನಾಡೋಜ ಡಾ.ಹಂಪ ನಾಗರಾಜಯ್ಯ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ, ‘ಕುಮಾರವ್ಯಾಸ ಭಾರತವನ್ನು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ 2 ರೂ.ಗೆ ಜನರಿಗೆ ತಲುಪುವ ಹಾಗೆ ಮಾಡಿದ್ದರು. ಮುಖ್ಯಮಂತ್ರಿ ನಿವಾಸದಲ್ಲಿ ಮನೆಯನ್ನು ಪುಸ್ತಕವನ್ನಾಗಿ ಮಾಡಿರುವುದು ಒಂದು ರೂಪಕವಾಗಿದೆ. ‘ಯಥಾ ರಾಜ ತಥಾ ಪ್ರಜಾ’ ಎನ್ನುವಂತೆ ಗ್ರಂಥಾಲಯ ಇಲಾಖೆಯವರಿಗೆ ಸ್ಫೂರ್ತಿಯಾಗುತ್ತದೆ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಮನೆಗೊಂದು ಗ್ರಂಥಾಲಯ ಎನ್ನುವುದು ದೊಡ್ಡ ಯೋಜನೆಯಾಗಿದೆ. ಇದರಿಂದ ಓದುಗರ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಎಲ್ಲ ಲೇಖಕರ ಜವಾಬ್ಧಾರಿಯೂ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರಕಾರದ ಕಾರ್ಯದರ್ಶಿ ಡಾ.ಎನ್.ಮಂಜುಳಾ, ನಿರ್ದೇಶಕಿ ಡಾ.ಧರಣೀದೇವಿ ಮಾಲಗತ್ತಿ, ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕಿರಣ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಏನಿದು? ‘ಮನೆಗೊಂದು ಗ್ರಂಥಾಲಯ’:

ಈ ಯೋಜನೆಯಡಿ ರಾಜ್ಯಾದ್ಯಂತ ಪ್ರಸಕ್ತ ಸಮಿತಿಯ ಅವಧಿಯಲ್ಲಿ 1 ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಪುಸ್ತಕಾಭಿರುಚಿಯನ್ನು ಇಂದಿನ ಯುವಪೀಳಿಗೆಯಲ್ಲಿ ಬೆಳೆಸುವುದು ಇದರ ಮುಖ್ಯ ಉದ್ದೇಶ. ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಕಟ್ಟುವುದು ಈ ಯೋಜನೆಯ ಕನಸು.

ಕನ್ನಡ ಪುಸ್ತಕ ಪ್ರಾಧಿಕಾರ ತಮ್ಮ ಮನೆಗಳಲ್ಲಿ ಗ್ರಂಥಾಲಯ ಆರಂಭಿಸುವ ಇಚ್ಛೆ ಉಳ್ಳವರನ್ನು ಸಂಪರ್ಕಿಸಿ ಆ ಭಾಗದ ಸಾಹಿತಿ ಬರಹಗಾರರನ್ನು ಅವರ ಮನೆಗೆ ಕರೆದೊಯ್ದು, ಅಲ್ಲೊಂದು ಕಾರ್ಯಕ್ರಮವನ್ನು ಆಯೋಜಿಸಿ ಪ್ರಾಧಿಕಾರದ ಪರವಾಗಿ ಅವರಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಮನೆಯ ಮಾಲಕರು 100 ಪುಸ್ತಗಳಿಂದ ಆರಂಭಿಸಿ ಗ್ರಂಥಾಲಯವನ್ನು ಸ್ಥಾಪನೆ ಮಾಡಬೇಕು. ಸದರಿ ಗ್ರಂಥಾಲಯವನ್ನು ಗಣ್ಯರಿಂದ, ಸಾಹಿತಿಗಳಿಂದ ಉದ್ಘಾಟನೆಯನ್ನು ಮಾಡಿಸುವ ಜವಾಬ್ದಾರಿ ಪ್ರಾಧಿಕಾರದ್ದು, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಜಾಗೃತ ಸಮಿತಿ ರಚನೆ. ಗ್ರಂಥಾಲಯ ಸ್ಥಾಪಿಸಲು ಪೆÇ್ರೀತ್ಸಾಹ ನೀಡಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ತಿಳಿಸಿದ್ದಾರೆ.

ಕುಮಾರವ್ಯಾಸ ಭಾರತ ಸಂಪುಟ:

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಕುಮಾರವ್ಯಾಸ ಭಾರತ ಕೃತಿಯ ಸಂಪುಟಗಳನ್ನು ಲೋಕಾರ್ಪಣೆ ಮಾಡಿದ್ದು, ಸಾಹಿತ್ಯ ಲೋಕದ ಅಜರಾಮರ ಕೃತಿಯಾದ ಕುಮಾರವ್ಯಾಸ ಭಾರತವನ್ನು ಕಡಿಮೆ ಬೆಲೆಗೆ ಓದುಗರಿಗೆ ಒದಗಿಸಲಾಗುವುದೆಂದು ಸುವರ್ಣ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಗದಗಿನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಕøತಿ ಇಲಾಖೆ ಸಚಿವರು ಘೋಷಿಸಿದ್ದರು. ಅದರಂತೆ ಕನ್ನಡ ಗಣಕ ಪರಿಷತ್ತು ಈ ಹಿಂದೆ ಪ್ರಕಟಿಸಿದ್ದ ಕುಮಾರವ್ಯಾಸ ಭಾರತದ ಕೃತಿಯ ಹಕ್ಕುಗಳನ್ನು ಪ್ರಾಧಿಕಾರ ಪಡೆದುಕೊಂಡು 2 ಸಂಪುಟಗಳಲ್ಲಿ ಪ್ರಕಟಿಸಿದೆ. ಈ ಎರಡೂ ಸಂಪುಟಗಳು ಸೇರಿ ಒಟ್ಟು 500ರೂ.ಗಳ ಮುಖಬೆಲೆ ನಿಗದಿಪಡಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News