ಬೆಂಗಳೂರು | ಬಾಂಬ್ ಸ್ಫೋಟಿಸುವುದಾಗಿ ಹುಸಿ ಕರೆ; ಆರೋಪಿಯ ಬಂಧನ
ಬೆಂಗಳೂರು : ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ವಿವಿಧೆಡೆ ಬಾಂಬ್ ಸ್ಫೋಟಿಸಲು ಸಂಚು ರೂಪಿಸಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ಕೊಠಡಿಗೆ ಸುಳ್ಳು ಕರೆ ಮಾಡಿದ್ದ ಆರೋಪಿಯನ್ನು ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮನ್ಸೂರ್ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ಪೊಲೀಸ್ ಕಂಟ್ರೋಲ್ ಕೊಠಡಿಗೆ ಕರೆ ಮಾಡಿದ್ದ ಮನ್ಸೂರ್ ತನ್ನನ್ನ ರಿಯಾಝ್ ಹೆಸರಿನಲ್ಲಿ ಪರಿಚಯಿಸಿಕೊಂಡು, ಬೆಂಗಳೂರಿನ ವಿವಿಧೆಡೆ ಗಣರಾಜ್ಯೋತ್ಸವ ದಿನ ಸ್ಫೋಟಿಸಲು ಮೂವರು ಸಂಚು ರೂಪಿಸಿದ್ದಾರೆಂದು ಆರು ಜನರ ಹೆಸರು ಮತ್ತು ವಿಳಾಸ ತಿಳಿಸಿದ್ದ. ಈ ಮಾಹಿತಿಯನ್ನು ಕಡೆಗಣಿಸದೆ ಪೊಲೀಸರು ಪರಿಶೀಲಿಸಿದಾಗ, ಅದೊಂದು ಹುಸಿ ಕರೆ ಎಂದು ತಿಳಿದು ಬಂದಿತ್ತು.
ಬಳಿಕ ಕರೆ ಮಾಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿರುವುದು ಗೊತ್ತಾಗಿದೆ.ಅದರಲ್ಲೂ, ಆರೋಪಿ ಮನ್ಸೂರ್ ಈ ಮೊದಲು ಕೆ.ಆರ್.ಮಾರ್ಕೆಟ್ ಬಳಿ ನಡೆಸುತ್ತಿದ್ದ ಪ್ರಾವಿಜನ್ ಸ್ಟೋರ್ ನಷ್ಟವುಂಟಾಗಿ ಮುಚ್ಚಲ್ಪಟ್ಟಿತ್ತು. ಬಳಿಕ ಮನ್ಸೂರ್ ಹೊಸದಾಗಿ ಗುಜರಿ ವ್ಯಾಪಾರ ಆರಂಭಿಸಿದ್ದ. ಆದರೆ ಆ ವ್ಯಾಪಾರವೂ ಕೈಹಿಡಿದರಲಿಲ್ಲ. ಇದರಿಂದ ಸಿಟ್ಟಿಗೆದ್ದ ಮನ್ಸೂರ್ ಪೊಲೀಸ್ ಕಂಟ್ರೋಲ್ ಕೊಠಡಿಗೆ ಕರೆ ಮಾಡಿ ಬಾಂಬ್ ಸ್ಪೋಟದ ಕತೆ ಹೇಳಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ.