ಬೆಂಗಳೂರು | ನಾಪತ್ತೆ ಆಗಿದ್ದ ವೈದ್ಯನ ಹತ್ಯೆ : ಮೂವರ ಬಂಧನ

Update: 2025-01-13 16:42 GMT

ಬೆಂಗಳೂರು : ಇತ್ತೀಚಿಗೆ ನಾಪತ್ತೆಯಾಗಿದ್ದ ಆಯುರ್ವೇದ ವೈದ್ಯನನ್ನು ಹಣದ ಆಸೆಗಾಗಿ ಮಧ್ಯವರ್ತಿಗಳು ಹತ್ಯೆ ಮಾಡಿರುವುದನ್ನು ಬನಶಂಕರಿ ಠಾಣೆ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ವೈದ್ಯ ಆನಂದ್ ಮೃತ ವೈದ್ಯನಾಗಿದ್ದು, ಕೊಲೆಗೈದ ಆರೋಪದಡಿ ಮುಹಮ್ಮದ್ ಗೌಸ್(31), ನದೀಂ ಪಾಷಾ (32) ಹಾಗೂ ನೂರ್ ಪಾಷಾ (39) ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.

ಜಯನಗರ ನಿವಾಸಿ ವೈದ್ಯ ಆನಂದ್ ಹಾಗೂ ಬಂಧಿತ ಆರೋಪಿಗಳಿಗೆ ಸಂಪರ್ಕ ಇದ್ದು, 90 ಲಕ್ಷ ರೂಪಾಯಿಗೆ ತಮ್ಮ ಮನೆಯನ್ನು ಪ್ರಸಾದ್ ಎಂಬುವವರಿಗೆ ಮಾರಾಟ ಮಾಡಿಸಿದ್ದರು. ಆ ವ್ಯವಹಾರದಲ್ಲಿ ಆನಂದ್ ಅವರಿಗೆ ಬಂದಿದ್ದ 45 ಲಕ್ಷ ರೂ. ಮುಂಗಡ ಹಣದಲ್ಲಿ ಮಧ್ಯವರ್ತಿಗಳು 33 ಲಕ್ಷ ರೂ. ಹಂಚಿಕೊಂಡಿದ್ದರು.

ಉಳಿದ 12 ಲಕ್ಷ ರೂ.ಗಳನ್ನು ಆನಂದ್ ಅವರಿಗೆ ನೀಡದೆ ಮುಹಮ್ಮದ್ ಗೌಸ್ ತಾನೇ ಉಳಿಸಿಕೊಂಡಿದ್ದ. ಮತ್ತೊಂದೆಡೆ ಮಾತುಕತೆಯಾಗಿದ್ದ ಹಣ ಆನಂದ್ ಕೈಸೇರುವ ಮುನ್ನವೇ ಅವರ ಮನೆಯ ಕೀಯನ್ನು ಖರೀದಿದಾರ ಪ್ರಸಾದ್ ಅವರಿಗೆ ಕೊಟ್ಟಿದ್ದ ಗೌಸ್, ಮನೆ ಕೆಲಸ ಮಾಡಿಸಿಕೊಳ್ಳಿ ಎಂದು ಹೇಳಿದ್ದ. ಇತ್ತ ವ್ಯವಹಾರದಲ್ಲಿ ಕೆಲ ಗೊಂದಲಗಳುಂಟಾದಾಗ ಆನಂದ್ ಅವರು ಪ್ರಸಾದ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದರಿಂದಾಗಿ ಉಳಿದ 45 ಲಕ್ಷ ರೂ.ಗಳನ್ನು ಪ್ರಸಾದ್ ಇನ್ನೂ ನೀಡಿರಲಿಲ್ಲ.ವ್ಯವಹಾರದ ಮಾತುಕತೆಗಾಗಿ ಮೈಸೂರಿನ ಲಾಡ್ಜ್‌ ನಲ್ಲಿ ಉಳಿದುಕೊಂಡಿದ್ದ ಆನಂದ್ ಪದೇ ಪದೇ ಬೆಂಗಳೂರಿಗೆ ಹೋಗೋಣವೆಂದು ಒತ್ತಾಯಿಸಿದಾಗ ಆರೋಪಿಗಳು ಇಕ್ಕಟ್ಟಿಗೆ ಸಿಲುಕಿದ್ದರು. ಹಣ ಕೈಸೇರುವ ಮುನ್ನವೇ ಮನೆ ಡೆಮಾಲಿಷ್ ಆಗಿರುವುದು ತಿಳಿದರೆ ಆನಂದ್ ತಮ್ಮ ವಿರುದ್ಧ ಪ್ರಕರಣ ದಾಖಲಿಸಬಹುದು.

ಬಾಕಿ ಉಳಿಸಿಕೊಂಡಿರುವ 12 ಲಕ್ಷ ಹಾಗೂ 45 ಲಕ್ಷ ರೂ. ಕೊಡಬೇಕಾಗುತ್ತದೆ. ಹೇಗಿದ್ದರೂ ಆನಂದ್ ಸಹಿಯಿರುವ ಖಾಲಿ ಚೆಕ್‍ಗಳು ತಮ್ಮ ಬಳಿಯಿರುವುದರಿಂದ ಆತನನ್ನು ಸಾಯಿಸಿದರೆ ಹಣವನ್ನು ನಾವೇ ಹಂಚಿಕೊಳ್ಳಬಹುದು ಎಂದು ಆರೋಪಿಗಳು ಸಂಚು ರೂಪಿಸಿ ಕಳೆದ ವರ್ಷ ಜು.9ರಂದು ಕೆಆರ್‌ಎಸ್ ಡ್ಯಾಮ್ ಬಳಿಯಿರುವ ಸಾಗರಕಟ್ಟೆ ಬ್ರಿಡ್ಜ್ ಬಳಿ ಕಾರು ನಿಲ್ಲಿ ನಿದ್ದೆಯ ಮಂಪರಿನಲ್ಲಿದ್ದ ಆನಂದ್ ಅವರ ಕತ್ತಿಗೆ ನೈಲಾನ್ ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದರು. ಬಳಿಕ ಕಾರನ್ನು ಯೂ ಟರ್ನ್ ಪಡೆದು ಮೃತದೇಹವನ್ನು ಲಕ್ಷ್ಮಣ ತೀರ್ಥದ ಹಿನ್ನೀರಿನಲ್ಲಿ ಎಸೆದು ಪರಾರಿಯಾಗಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಇನ್ನೂ, ಜೂನ್ 1ರಿಂದ ಆನಂದ್ ಸಂಪರ್ಕಕ್ಕೆ ಸಿಗದಿದ್ದಾಗ ಹುಡುಕಾಟ ನಡೆಸಿ ವಿಫಲವಾಗಿದ್ದ ಅವರ ಸಂಬಂಧಿ ರಘುಪತಿ ಎಂಬುವವರು ಜುಲೈ 18ರಂದು ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಆನಂದ್ ಅವರನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚಿಸಲು ಹೈಕೋರ್ಟ್‍ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಹ ಸಲ್ಲಿಸಿದ್ದರು. ಬಳಿಕ ನಾಪತ್ತೆಯಾಗಿರುವ ಆನಂದ್ ಅವರನ್ನು ಆದಷ್ಟು ಬೇಗ ಪತ್ತೆಹಚ್ಚುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿತ್ತು.

ಅದರನ್ವಯ ತನಿಖೆ ಚುರುಕುಗೊಳಿಸಿದಾಗ ಆನಂದ್ ಬಳಸುತ್ತಿದ್ದ ಮೊಬೈಲ್ ಫೋನ್ ಹೊರ ರಾಜ್ಯಗಳಲ್ಲಿ ಪತ್ತೆಯಾಗಿತ್ತು. ಛತ್ತೀಸ್‍ಗಢಕ್ಕೆ ತೆರಳಿ ಫೋನ್ ಬಳಸುತ್ತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ನೂರ್ ಪಾಷಾನ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ಸೈಯ್ಯದ್ ನೂರ್ ಪಾಷಾನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹತ್ಯೆಯ ವಿಚಾರ ಬಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News