ಎಚ್‍ಎಂಟಿ ಕಾರ್ಖಾನೆ ಪುನಶ್ಚೇತನ | ನಿವೃತ್ತ ಕಾರ್ಮಿಕರ ವೇತನ ಬಾಕಿ ಪಾವತಿಗೆ ಕ್ರಮ: ಕೇಂದ್ರ ಸಚಿವ ಕುಮಾರಸ್ವಾಮಿ
ಬೆಂಗಳೂರು : ‘ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್(ಎಚ್‍ಎಂಟಿ)ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದರ ಜೊತೆಗೆ ನಿವೃತ್ತ ಹಾಗೂ ಹಾಲಿ ಕಾರ್ಮಿಕರ ವೇತನ ಬಾಕಿ ಪಾವತಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಸೋಮವಾರ ಬೆಂಗಳೂರಿನ ಎಚ್‍ಎಂಟಿ ಕಚೇರಿಯಲ್ಲಿ ಸಚಿವರನ್ನು ಭೇಟಿಯಾಗಿ ಉದ್ಯೋಗಿಗಳು ವೇತನ, ಗ್ರಾಚ್ಯುಟಿ, ಭವಿಷ್ಯ ನಿಧಿ ಪಾವತಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಉದ್ಯೋಗಿಗಳ ಮನವಿ ಆಲಿಸಿದ ನಂತರ ಮಾತನಾಡಿದ ಕುಮಾರಸ್ವಾಮಿ, ಉದ್ಯೋಗಿಗಳಿಗೆ ಬಾಕಿ ಇರುವ 361 ಕೋಟಿ ರೂ. ಮೊತ್ತ ಪಾವತಿಸುವ ಬಗ್ಗೆ ಮಾರ್ಗೋಪಾಯ ಹುಡುಕಲಾಗುವುದು. ಈ ಬಗ್ಗೆ ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳಿಗೆ ಕಾಯಕಲ್ಪ ನೀಡುವ ಪ್ರಯತ್ನ ನಡೆಸಿದ್ದೇನೆ. ಏಕೆಂದರೆ, ಪ್ರಧಾನಿಗಳ ವಿಕಸಿತ ಭಾರತ್ ಕನಸು ದೊಡ್ಡದು. ಆ ಗುರಿ ಮುಟ್ಟಲು ನಾವು ಮೆಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ್ ಭಾರತ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
ಪ್ರಧಾನಿಗಳ ನೇತೃತ್ವದಲ್ಲಿ ಸಂಕಷ್ಟದಲ್ಲಿರುವ ವಿವಿಧ ಕೈಗಾರಿಕೆಗಳಿಗೆ ಮರುಜೀವ ಕೊಡುವ ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ವೈಜಾಗ್ ಸ್ಟೀಲ್, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಅದಿರು ಕಾರ್ಖಾನೆ, ಸೇಲಂ ಸ್ಟೀಲ್ ಇತ್ಯಾದಿ ಸೇರಿವೆ ಎಂದು ಕುಮಾರಸ್ವಾಮಿ ಉದ್ಯೋಗಿಗಳಿಗೆ ಧೈರ್ಯ ತುಂಬಿದರು.
ಆರಂಭಕ್ಕೆ ಮಾತನಾಡಿದ ಎಚ್‍ಎಂಟಿ ನಿವೃತ್ತ ಉದ್ಯೋಗಿಗಳು, ‘ನಾವು ನಿವೃತ್ತರಾಗಿ ಹಲವಾರು ವರ್ಷಗಳೇ ಕಳೆದಿದ್ದರೂ ನಮಗೆ ದೊರೆಯಬೇಕಾದ ಸೌಲಭ್ಯಗಳು ಇನ್ನೂ ಬಂದಿಲ್ಲ. ಕೆಲವರು ಕಾನೂನು ಹೋರಾಟ ನಡೆಸುತ್ತಿದ್ದು, ಇನ್ನೂ ಅನೇಕ ಉದ್ಯೋಗಿಗಳಿಗೆ ಅದು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತಾವು ತುರ್ತಾಗಿ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಅಲ್ಲದೆ, ಕಂಪೆನಿಯಿಂದ ಬರಬೇಕಾದ ನಮ್ಮ ಸೌಲಭ್ಯಗಳು ಬಾರದೆ ಇರುವುದರಿಂದ ನಮಗೆ ಕಾಯಿಲೆ ಬಂದಾಗ ಔಷಧ ಖರೀದಿ ಮಾಡುವುದು ಕಷ್ಟವಾಗಿದೆ. ಸುಮಾರು ಐದಾರು ವರ್ಷಗಳಿಂದ ನಮಗೆ ಬರಬೇಕಿರುವ 30ರಿಂದ 40 ಲಕ್ಷ ರೂ. ಹಣ ಕಂಪನಿಯಲ್ಲಿಯೇ ಉಳಿದಿದೆ. ಈ ಹಣವನ್ನು ತಾವು ಕೊಡಿಸಬೇಕು ಎಂದು ಅವರು ಕೋರಿದರು.
‘ಯಾವುದೇ ಕಾರಣಕ್ಕೂ ದೇಶದ ಪ್ರತಿಷ್ಟಿತ ಕಂಪೆನಿಯಾಗಿದ್ದ ಎಚ್‍ಎಂಟಿಯನ್ನು ಮುಚ್ಚಬಾರದು. ಒಂದು ವೇಳೆ ಅಂತಹ ಸಂದರ್ಭ ಬಂದರೆ ಬಿಎಚ್‍ಇಎಲ್, ಬಿಇಎಲ್, ಬಿಇಎಂಎಲ್‍ನಂತಹ ಕಂಪೆನಿಗಳ ಜತೆ ಎಚ್‍ಎಂಟಿಯನ್ನು ವಿಲೀನ ಮಾಡಬೇಕು ಅಥವಾ ನೌಕರರಿಗಾದರೂ ಆ ಸಂಸ್ಥೆಗಳಲ್ಲಿ ಉದ್ಯೋಗವಕಾಶ ಕಲ್ಪಿಸಿಕೊಡಬೇಕು. ಕಾಲಮಿತಿಯೊಳಗೆ ತಮ್ಮ ಕಷ್ಟಗಳಿಗೆ ಸ್ಪಂದಿಸಬೇಕು, ಇಲ್ಲವಾದರೆ ನಮಗೆ ಬದುಕೇ ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.