ಅಂಚೆ ಇಲಾಖೆಯ ರಿಜಿಸ್ಟರ್ ಪಾರ್ಸಲ್ ಸೇವೆ ಪುನರ್ ಆರಂಭಿಸಿ: ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ಅಂಚೆ ಇಲಾಖೆ ಸ್ಥಗಿತಗೊಳಿಸಿರುವ ರಿಜಿಸ್ಟರ್ ಪಾರ್ಸಲ್ ಸೇವೆಯಿಂದ ಕನ್ನಡ ಪುಸ್ತಕ ಪ್ರಕಾಶನ ಸಂಸ್ಥೆಗಳಿಗೆ ಮಾರಣಾಂತಿಕವಾಗಿ ಪರಿಣಮಿಸಿದ್ದು, ಈ ಸೇವೆಗಳನ್ನು ಕೂಡಲೇ ಪುನರ್ ಆರಂಭಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಸೋಮವಾರ ಈ ಕುರಿತು ಕೇಂದ್ರ ಸಂವಹನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧ್ಯ ಅವರಿಗೆ ಪತ್ರ ಬರೆದಿರುವ ಅವರು, ಅಂಚೆ ಇಲಾಖೆ ಮುದ್ರಿತ ಪುಸ್ತಕಗಳನ್ನು ಕಳುಹಿಸಲು ರಿಜಿಸ್ಟರ್ ಪಾರ್ಸಲ್ ಸೇವೆಗಳನ್ನು ಒದಗಿಸುತ್ತಿದ್ದು, ಇದನ್ನು ಏಕಾಏಕಿ ನಿಲ್ಲಿಸಲಾಗಿದೆ. ಈ ಸೇವೆಯಲ್ಲಿ ವಿಧಿಸಲಾಗುತ್ತಿದ್ದ ಕನಿಷ್ಠ ದರದ ಅವಕಾಶವನ್ನು ಬಳಸಿಕೊಂಡು ಕನ್ನಡದ ಬಹುಪಾಲು ಪ್ರಕಾಶಕರು ತಮ್ಮ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪತ್ರದಲ್ಲಿ ಹೇಳಿದ್ದಾರೆ.
ಈ ಸೇವೆ ಈಗ ಸ್ಥಗಿತಗೊಂಡಿರುವುದರಿಂದ ಮೊದಲೇ ಸಂಕಷ್ಟದಲ್ಲಿರುವ ಕನ್ನಡ ಪುಸ್ತಕೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದರುತ್ತದೆ. ಈ ಕುರಿತು ಕೇಂದ್ರ ಸರಕಾರವು ಕೂಡಲೇ ಕ್ರಮ ಕೈಗೊಂಡು ಪ್ರಿಂಟೆಡ್ ಬುಕ್ ರಿಜಿಸ್ಟರ್ ಪಾರ್ಸಲ್ ಸೇವೆಗಳನ್ನು ಪುನರ್ ಆರಂಭಿಸಲು ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.