‘ಚಾಯ್ ಪಾಯಿಂಟ್’ನೊಂದಿಗೆ ಕೆಎಂಎಫ್ ಪಾಲುದಾರಿಕೆ
ಬೆಂಗಳೂರು: ಸೋಮವಾರದಿಂದ(ಜ.13) ಫೆ.26ರ ವರೆಗೆ ಪ್ರಯಾಗರಾಜ್‍ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್)ನ ‘ನಂದಿನಿ’ ಯುಎಚ್‍ಟಿ ಗುಡ್‍ಲೈಫ್ ಹಾಲು ಹಾಗೂ ಇತರೆ ಉತ್ಪನ್ನಗಳ ಮಾರಾಟ ಮಾಡುವ ಸಂಬಂಧ ಚಾಯ್ ಪಾಯಿಂಟ್‍ನೊಂದಿಗೆ ಪಾಲುದಾರಿಕೆಗೆ ಸಹಿ ಹಾಕಲಾಗಿದೆ ಎಂದು ಕೆಎಂಎಫ್ ತಿಳಿಸಿದೆ.
ಸೋಮವಾರ ಕೆಎಂಎಫ್‍ನ ಮಾರುಕಟ್ಟೆ ವಿಭಾಗದ ನಿರ್ದೇಶಕರು ಪ್ರಕಟನೆ ಹೊರಡಿಸಿದ್ದು, ಚಾಯ್ ಪಾಯಿಂಟ್ ದೇಶದ ಅತಿದೊಡ್ಡ ಟೀ ಕೆಫೆ ಸಂಸ್ಥೆಯಾಗಿರುವುದಲ್ಲದೇ, ಪ್ರಯಾಗ್ ರಾಜ್‍ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ 2025ರಲ್ಲಿ ಪಾನೀಯ ಮಾರಾಟ ವ್ಯವಹಾರದಲ್ಲಿ ಮುಂಚೂಣಿಯಲ್ಲಿದೆ ಎಂದಿದ್ದಾರೆ.
ಮಹಾ ಕುಂಭಮೇಳವನ್ನು ಆಯೋಜಿಸಲಾಗಿರುವ ಸಂಕೀರ್ಣದಲ್ಲಿ ಚಾಯ್ ಪಾಯಿಂಟ್ 10 ಮಳಿಗೆಗಳನ್ನು ತೆರೆದಿದ್ದು, ಒಂದು ಕೋಟಿ ಕಪ್‍ಗಳಿಗಿಂತಲೂ ಹೆಚ್ಚು ಚಹಾವನ್ನು ತಯಾರಿಸಿ, ಪ್ರವಾಸಿಗರಿಗೆ ಒದಗಿಸಲು ಸಿದ್ಧತೆಯನ್ನು ಮಾಡಿಕೊಂಡಿದೆ. ಒಂದೇ ಸಮಾರಂಭದಲ್ಲಿ ಅತೀ ಹೆಚ್ಚು ಕಪ್ ಚಹಾವನ್ನು ಮಾರಾಟ ಮಾಡಿ ಗಿನ್ನೀಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಮೇಳದಲ್ಲಿ ಸಿದ್ಧಪಡಿಸಲಾಗುವ ಪ್ರತಿಯೊಂದು ಕಪ್ ಚಹಾವು ನಂದಿನಿಯ ಪರಿಶುದ್ಧ ಹಾಗೂ ಉತ್ಕೃಷ್ಟ ಗುಣಮಟ್ಟದ ಹಾಲನ್ನು ಬಳಸಿ ತಯಾರಿಸಲಾಗುತ್ತದೆ. ಚಹಾದ ಜೊತೆಗೆ ಮೆಚಾಯ್ ಪಾಯಿಂಟ್ ಮಳಿಗೆಗಳು ಸಿಹಿ ಉತ್ಪನ್ನ ಮತ್ತು ಮಿಲ್ಕ್ ಶೇಕ್ ಗಳು ಸೇರಿದಂತೆ ವಿವಿಧ ನಂದಿನಿ ಉತ್ಪನ್ನಗಳನ್ನೂ ಮಾರಾಟ ಮಾಡಲಾಗುತ್ತಿದೆ ಎಂದು ಕೆಎಂಎಫ್‍ನ ಮಾರುಕಟ್ಟೆ ವಿಭಾಗದ ನಿರ್ದೇಶಕರು ತಿಳಿಸಿದ್ದಾರೆ.
ಚಾಯ್ ಪಾಯಿಂಟ್ ಪಾಲುದಾರಿಕೆಯು ರಾಷ್ಟ್ರದ ಉತ್ತರಭಾಗದ ರಾಜ್ಯ ಮಾರುಕಟ್ಟೆಗಳಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಲು ಹಾಗೂ ರಾಷ್ಟ್ರವ್ಯಾಪ್ತಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಉತ್ಪನ್ನಗಳನ್ನು ತಲುಪಿಸುವ ಉದ್ಧೇಶ ಹೊಂದಿದೆ. ಮೆಚಾಯ್ ಪಾಯಿಂಟ್ ನಂದಿನಿಯ ದೀರ್ಘಾವಧಿಯ ಗ್ರಾಹಕರಾಗಿರುವುದಲ್ಲದೇ, ಭಾರತದಲ್ಲಿಯೇ ಅತಿದೊಡ್ಡ ನಂದಿನಿ ಯುಹೆಚ್ ಗುಡ್ ಲೈಫ್ ಹಾಲು, ಬೆಣ್ಣೆ, ತುಪ್ಪ ಹಾಗೂ ಪನ್ನಿ ಇತ್ಯಾದಿ ಉತ್ಪನ್ನಗಳ ಬಳಕೆದಾರರಲ್ಲಿ ಒಬ್ಬರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಹಾಲು ಮಹಾಮಂಡಳಿಯು ಮಹಾ ಕುಂಭಮೇಳ 2025ಕ್ಕೆ ಚಾಯ್ ಪಾಯಿಂಟ್ ರವರೊಂದಿಗೆ ಪಾಲುದಾರರಾಗಲು ಅತ್ಯಂತ ಉತ್ಸುಕರಾಗಿದ್ದು, ಮೇಳದಲ್ಲಿ ನಂದಿನಿ ಉತ್ಪನ್ನಗಳನ್ನು ಪ್ರದರ್ಶಿಸಿ, ವೈವಿಧ್ಯಮಯ ಗ್ರಾಹಕರಿಗೆ ಒದಗಿಸುವ ಮತ್ತು ಉತ್ತರ ಭಾರತದಲ್ಲಿ ನಂದಿನಿ ಉತ್ಪನ್ನಗಳ ಲಭ್ಯತೆಯನ್ನು ಬಲಪಡಿಸಲು ಒಂದು ಸುವರ್ಣ ಅವಕಾಶವಾಗಿದೆ. ಈ ಐತಿಹಾಸಿಕ ಮೇಳದಲ್ಲಿ ನಂದಿನಿಯ ಉತ್ಪನ್ನಗಳ ಲಭ್ಯತೆಯೊಂದಿಗೆ ಮಹಾಕುಂಭ ಮೇಳದ ಯಶಸ್ಸನ್ನು ನಿರೀಕ್ಷಿಸುತ್ತಿದ್ದೇವೆ.
-ಬಿ.ಶಿವಸ್ವಾಮಿ, ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ