ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡದೆ ವಿಕಸಿತ ಭಾರತ ಸಾಧ್ಯವಿಲ್ಲ: ಜಸ್ಮಿನ್ ಶಾ
ಬೆಂಗಳೂರು : ಸರಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡದಿದ್ದಲ್ಲಿ ಯಾವುದೇ ಕಾರಣಕ್ಕೂ 2047 ಇರಲಿ 2147ರ ತನಕವೂ ಸಹ ವಿಕಸಿತ ಭಾರತ ನಿರ್ಮಾಣ ಸಾಧ್ಯವಿಲ್ಲ ಎಂದು ಹೊಸದಿಲ್ಲಿ ಅಭಿವೃದ್ಧಿ ಕಮಿಷನ್‍ನ ಮಾಜಿ ಉಪಾಧ್ಯಕ್ಷ ಜಸ್ಮಿನ್ ಶಾ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ದೊಮ್ಮಲೂರು ಎರಡನೇ ಹಂತದಲ್ಲಿರುವ ಬೆಂಗಳೂರು ಅಂತರ್ ರಾಷ್ಟ್ರೀಯ ಕೇಂದ್ರದ ಸಭಾಂಗಣದಲ್ಲಿ ‘ದಿ ದಿಲ್ಲಿ ಮಾಡೆಲ್’ ಪುಸ್ತಕವನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2015ರಿಂದ 2023ರವರೆಗೆ ಹೊಸದಿಲ್ಲಿಯಲ್ಲಿ ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು, ಸಂಚಾರ, ಪರಿಸರ ಇನ್ನು ಮುಂತಾದ 60 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ಮಾಡಿರುವ ಆಮೂಲಾಗ್ರ ಬದಲಾವಣೆಗಳಲ್ಲಿ ನನ್ನ ಪಾತ್ರವೂ ಸಹ ನೇರವಾಗಿ ಇದ್ದುದರಿಂದ ಈ ದೆಹಲಿ ಮಾಡೆಲ್ ಪುಸ್ತಕವನ್ನು ಬರೆಯಲು ಸಾಧ್ಯವಾಯಿತು ಎಂದರು.
ವ್ಯವಸ್ಥೆಯ ಬದಲಾವಣೆಗಾಗಿ ಮಾಡಿರುವ ಅನೇಕ ಸುಧಾರಣೆಗಳನ್ನು ಪ್ರಾಮಾಣಿಕ ಹಾದಿಯಲ್ಲಿ ರಚನಾತ್ಮಕವಾಗಿ ಟೀಕಿಸದೆ ವಿರೋಧ ಪಕ್ಷಗಳು ರೇವಡಿ ಸಂಸ್ಕøತಿಯೆಂದು ಅಪಪ್ರಚಾರ ಮಾಡುತ್ತಿರುವುದು ರಾಷ್ಟ್ರಕ್ಕೆ ಶೋಭೆ ತರುವ ವಿಚಾರವಲ್ಲ ಎಂದು ಜಸ್ಮಿನ್ ಶಾ ಬೇಸರ ವ್ಯಕ್ತಪಡಿಸಿದರು.
ನಾವು ಹೊಸದಿಲ್ಲಿಯಲ್ಲಿ ಶಿಕ್ಷಣ ಕ್ರಾಂತಿಯನ್ನು ಕೈಗೊಂಡ ಪರಿಣಾಮವಾಗಿ ಈಗ ಪ್ರತಿ ವರ್ಷ ಎರಡೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗೆ ದಾಖಲಾಗುತ್ತಿದ್ದಾರೆ. 25,000ಕ್ಕೂ ಹೆಚ್ಚು ತರಗತಿಗಳು ಅತ್ಯಾಧುನಿಕವಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಹೊಸದಿಲ್ಲಿಯ ಮಕ್ಕಳಿಗೆ ನೀಡುತ್ತಿದ್ದೇವೆ. 10 ವರ್ಷದಿಂದ ಶೇ.97ರಷ್ಟು ಸರಕಾರಿ ಶಾಲೆಯ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ ಎಂದು ಜಸ್ಮಿನ್ ಶಾ ವಿವರಿಸಿದರು.
ಬೆಂಗಳೂರಿಗೂ ನನಗೂ ಅವಿನಾಭಾವ ಸಂಬಂಧವಿದ್ದು, ಇಲ್ಲಿನ ಐಟಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾಗ ಪ್ರತಿ ದಿನ 5 ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಇದ್ದದ್ದು ನನಗೆ ಈ ರೀತಿಯ ಸಾಧನೆಗೆ ಪ್ರೇರೇಪಣೆ ನೀಡಿತು ಎಂದು ಜಸ್ಮಿನ್ ಶಾ ಸ್ಮರಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಮಾತನಾಡಿ, ದೆಹಲಿ ಮಾಡೆಲ್‍ನ ಅನೇಕ ಕಾರ್ಯಕ್ರಮಗಳನ್ನು ಕರ್ನಾಟಕವು ಸೇರಿದಂತೆ ಹಲವು ರಾಜ್ಯಗಳಲ್ಲಿ ಅನುಸರಿಸಲಾಗಿದ್ದು, ಆದರೆ, ನಮ್ಮಂತೆ ವೈಜ್ಞಾನಿಕವಾಗಿ ಕಾರ್ಯರೂಪಗೊಳಿಸುವಲ್ಲಿ ವಿಫಲವಾಗಿವೆ ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಪುಸ್ತಕ ಬಿಡುಗಡೆಗೊಳಿಸಿದರು, ಪತ್ರಕರ್ತೆ ಧನ್ಯ ರಾಜೇಂದ್ರನ್ ನಿರೂಪಿಸಿದರು.
‘10 ವರ್ಷಗಳಿಂದ ಯಾವುದೇ ಬೆಲೆ ಏರಿಕೆ ಮಾಡದಿರುವುದೇ ‘ದೆಹಲಿ ಮಾಡೆಲ್’ನ ವಿಶೇಷ!’
ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಹೊಸದಿಲ್ಲಿಯಲ್ಲಿನ ವಿದ್ಯುತ್ ಶಕ್ತಿ ಬೆಲೆ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿದ್ದು, ಹಿಂದಿನ 10 ವರ್ಷಗಳಿಂದ ಯಾವುದೇ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚುವರಿ ಮಾಡಿಲ್ಲದಿರುವುದು ‘ದೆಹಲಿ ಮಾಡೆಲ್’ನ ವಿಶೇಷವಾಗಿದೆ. ಇದೇ ರೀತಿ ಹೊಸದಿಲ್ಲಿಯಲ್ಲಿ ಮೂಲಭೂತ ಸೌಕರ್ಯ, ಪರಿಸರ, ಸಂಚಾರ ಇನ್ನಿತರ ಕ್ಷೇತ್ರಗಳಲ್ಲಿ ಗಣನೀಯ ಸುಧಾರಣೆಯನ್ನು ತಂದಿದ್ದೇವೆ ಎಂದು ಜಸ್ಮಿನ್ ಶಾ ತಿಳಿಸಿದರು.