ಆನೇಕಲ್: ಬರ್ತ್ ಡೇ ಪಾರ್ಟಿ ವೇಳೆ ಗದ್ದಲ; ಪ್ರಶ್ನಿಸಿದ ನೆರೆ ಮನೆಯ ಇಬ್ಬರಿಗೆ ಚಾಕು ಇರಿತ
ಬೆಂಗಳೂರು,ಜ.11: ರಾತ್ರಿ ಹುಟ್ಟು ಹಬ್ಬದ ಮೋಜು ಮಸ್ತಿಯನ್ನು ಪ್ರಶ್ನಿಸಿದ ಪಕ್ಕದ ಮನೆ ಮಹಿಳೆ ಮತ್ತು ಆಕೆಯ ತಮ್ಮನಿಗೆ ರೌಡಿ ಶೀಟರ್ ಒಬ್ಬ ಚಾಕು ಇರಿದ ಘಟನೆ ಆನೇಕಲ್ ಹೆಬ್ಬಗೋಡಿಯ ತಿರುಪಾಳ್ಯದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಆರೋಪಿಯನ್ನು ರೌಡಿ ಶೀಟರ್ ಕರಿಯ ವಿಜಿ ಎಂದು ಗುರುತಿಸಲಾಗಿದೆ. ಈತ ಶನಿವಾರ ರಾತ್ರಿ ತನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಮದ್ಯ ಪಾರ್ಟಿಯ ಮತ್ತಿನಲ್ಲಿ ಡಿಜೆಯ ಭರಾಟೆ ಜೋರಾಗಿತ್ತು ಎಂದು ಆರೋಪಿಸಲಾಗಿದೆ. ಮನಸೋ ಇಚ್ಚೆ ಕುಡಿದಿದ್ದರಿಂದ ಇಡೀ ರಾತ್ರಿ ಗದ್ದಲ ಮುಂದುವರೆದಿತ್ತು ಎನ್ನಲಾಗಿದ್ದು, ಪಕ್ಕದ ಮನೆಯ ಮಹಿಳೆ ಮಂಜುಳಾ ಎಂಬವರು ಪ್ರಶ್ನಿಸಿದ್ದಕ್ಕೆ ಕರಿಯ ವಿಜಿ ಚಾಕುವಿನಿಂದ ಮಂಜುಳಾಗೆ ಇರಿದಿದ್ದಾನೆ ಎಂದು ತಿಳಿದು ಬಂದಿದೆ.
ತಕ್ಷಣ ಅಕ್ಕನ ನೆರವಿಗೆ ಬಂದ ತಮ್ಮ ವಿಶ್ವನಾಥ್ ತಡೆಯಲು ಕರಿಯ ವಿಜಿಯನ್ನು ತಡೆಯಲು ಪ್ರಯತ್ನಿಸಿದ್ದು, ವಿಶ್ವನಿಗೂ ಚಾಕು ಇರಿತವಾಗಿದೆ. ಕೂಡಲೇ ನೆರೆಹೊರೆಯವರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ರೌಡಿ ಶೀಟರ್ ವಿಜಿ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿದ್ದು ಅನಂತರ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.