ಭತ್ತ, ತೊಗರಿ ಖರೀದಿ ಕೇಂದ್ರ ತೆರೆಯದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ : ಆರ್.ಅಶೋಕ್ ಎಚ್ಚರಿಕೆ

Update: 2025-01-11 15:13 GMT

ಆರ್.ಅಶೋಕ್

ಬೆಂಗಳೂರು : ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ನೆರವಾಗಬೇಕು. ಸರಕಾರ ಕೂಡಲೇ ಈ ಕ್ರಮ ಕೈಗೊಳ್ಳದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಸರಕಾರಕ್ಕೆ ಒತ್ತಾಯ ಮಾಡಿದ್ದರೂ ಅತ್ತ ಗಮನ ಹರಿಸದ ಕಾಂಗ್ರೆಸ್ ಸರಕಾರ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇನ್ನು 24 ಗಂಟೆಯೊಳಗೆ ಭತ್ತ-ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿಯಬೇಕಾಗುತ್ತದೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಔತಣಕೂಟಗಳು, ರಾಜಕೀಯ ಮೇಲಾಟಗಳಲ್ಲೇ ನಿರತರಾಗಿದ್ದಾರೆ. ಈ ಕೆಲಸಗಳು ಮುಗಿದಿದ್ದರೆ ಸ್ವಲ್ಪ ರೈತರ ಸಮಸ್ಯೆಗಳತ್ತ ಗಮನ ಹರಿಸುವ ಮನಸ್ಸು ಮಾಡಬೇಕು. ಬಿಡುವು ಇಲ್ಲದಿದ್ದರೆ ಕನಿಷ್ಠ ಪಕ್ಷ ಕೃಷಿ ಸಚಿವ ಚೆಲುವರಾಯ ಸ್ವಾಮಿಯವರಿಗಾದರೂ, ಅವರು ಕೃಷಿ ಸಚಿವರು ಎಂಬುದನ್ನು ಒಮ್ಮೆ ನೆನಪು ಮಾಡಬೇಕು ಎಂದು ಅವರು ಲೇವಡಿ ಮಾಡಿದ್ದಾರೆ.

ಕುರ್ಚಿಗಾಗಿ ಕಾದಾಟ :

ಈ ದರಿದ್ರ ಸರಕಾರದಲ್ಲಿ ಒಬ್ಬರು ಕುರ್ಚಿ ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದರೆ, ಇನ್ನೊಬ್ಬರು ಕುರ್ಚಿ ಕಿತ್ತುಕೊಳ್ಳಲು ಕತ್ತಿ ಮಸೆಯುತ್ತಿದ್ದಾರೆ. ಇವರಿಬ್ಬರ ನಡುವೆ ಸಚಿವರು ಅವರವರ ಅಸ್ತಿತ್ವ ಉಳಿಸಿಕೊಳ್ಳಲು ಗೌಪ್ಯ ಸಭೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ ಆಡಳಿತ ಯಂತ್ರ ಕುಸಿದು ರೈತರ ಕಷ್ಟ ಕೇಳಲು ಸರಕಾರವೇ ಇಲ್ಲದಂತಾಗಿದೆ ಎಂದು ಆರ್.ಅಶೋಕ ದೂರಿದ್ದಾರೆ.

ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಬೆಲೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು, ಸರಕಾರ ಯಾವಾಗ ತೊಗರಿ ಖರೀದಿ ಕೇಂದ್ರ ತೆರೆಯಲಿದೆ ಎಂದು ರೈತರು ಎದುರು ನೋಡುತ್ತಿದ್ದಾರೆ. ಈ ಬಾರಿ ತೇವಾಂಶದ ಇಳಿಕೆಯಿಂದ ಬೆಳೆ ಹಾನಿಯಾಗಿದೆ ಎಂದು ಸರಕಾರಿ ದಾಖಲೆಗಳೇ ಹೇಳುತ್ತವೆ. ಆದರೆ, ಇದುವರೆಗೂ ರಾಜ್ಯ ಸರಕಾರ ಪರಿಹಾರದ ಮಾತೇ ಆಡುತ್ತಿಲ್ಲ ಎಂದಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News