ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ‘ನಿಮ್ಮ ಸೇನೆಯ ಬಗ್ಗೆ ತಿಳಿದುಕೊಳ್ಳಿ’ ಮೇಳ ಆಯೋಜನೆ
ಬೆಂಗಳೂರು: ಭಾರತೀಯ ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯಗಳು, ತಾಂತ್ರಿಕ ಪ್ರಗತಿಗಳನ್ನು ಜನ ಸಾಮಾನ್ಯರಿಗೆ ಪರಿಚಯಿಸಲು ಕರ್ನಾಟಕ ಮತ್ತು ಕೇರಳ ಉಪ ಪ್ರದೇಶ ಪ್ರಧಾನ ಕಚೇರಿ ವತಿಯಿಂದ ಶನಿವಾರ ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ‘ನಿಮ್ಮ ಸೇನೆಯ ಬಗ್ಗೆ ತಿಳಿದುಕೊಳ್ಳಿ’ ಮೇಳವನ್ನು ಆಯೋಜಿಸಲಾಗಿತ್ತು.
ಸೇನೆಯ ರೋಮಾಂಚಕಾರಿ ಮೋಟರ್ ಸೈಕಲ್‍ಗಳು, ಪ್ಯಾರಾಚೂಟ್‍ಗಳು, ಟ್ಯಾಂಕರ್‍ಗಳು ಮತ್ತು ಡ್ರೋನ್‍ಗಳು ಸೇರಿದಂತೆ ಯುದ್ಧ ಉಪಕರಣಗಳನ್ನು ಸಾರ್ವಜನಿಕರಿಗೆ ಈ ಮೇಳದ ಅಂಗವಾಗಿ ಪರಿಚಯಿಸಲಾಯಿತು.
77ನೇ ಸೇನಾ ದಿನವನ್ನು ಸ್ಮರಿಸಲು ಭಾರತೀಯ ಸೇನೆಯು ಆಯೋಜಿಸಿದ್ದ ಈ ಮೇಳಕ್ಕೆ ಬೆಂಗಳೂರಿನ ನಾಗರಿಕರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಭಾರತೀಯ ಸಶಸ್ತ್ರ ಪಡೆಗಳ ಶಕ್ತಿ, ವೃತ್ತಿಪರತೆ ಮತ್ತು ಬಹುಮುಖ ಪ್ರತಿಭೆಯನ್ನು ಕಣ್ಣು ತುಂಬಿಕೊಳ್ಳಲು ಈ ಮೇಳ ಸಹಕಾರಿಯಾಯಿತು.
ಈ ಕಾರ್ಯಕ್ರಮವನ್ನು ಪಿವಿಎಸ್‍ಎಂ, ವೈಎಸ್‍ಎಂನ ಕರ್ನಾಟಕ ಮತ್ತು ಕೇರಳ ಉಪ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ವಿ.ಟಿ.ಮ್ಯಾಥ್ಯೂ ಉದ್ಘಾಟಿಸಿದರು. ಸಮಾರಂಭವು ಆರ್ಮಿ ಪೈಪ್ ಬ್ಯಾಂಡ್‍ನಿಂದ ರಾಷ್ಟ್ರಗೀತೆ ನುಡಿಸುವಿಕೆಯೊಂದಿಗೆ ಪ್ರಾರಂಭವಾಯಿತು, ನಂತರ ರೋಮಾಂಚಕ ಪ್ಯಾರಾ-ಮೋಟಾರ್ ಗ್ಲೈಡಿಂಗ್ ಪ್ರದರ್ಶನ ನಡೆಯಿತು. ಮೇಳದಲ್ಲಿ ಎನ್‍ಸಿಸಿ ಕೆಡೆಟ್‍ಗಳು, ಶಾಲಾ ಮಕ್ಕಳು, ನಾಗರಿಕ ಗಣ್ಯರು, ಮಾಜಿ ಸೈನಿಕರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿದ್ದರು.