ಜಾತಿಗಣತಿ ವರದಿ ʼಅವೈಜ್ಞಾನಿಕʼ : ತಿರಸ್ಕರಿಸಲು ಒಕ್ಕಲಿಗರ ಸಂಘ ಆಗ್ರಹ

Update: 2025-01-11 06:34 GMT

ಬಿ.ಕೆಂಚಪ್ಪ ಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ

ಬೆಂಗಳೂರು: ʼರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷಾ (ಜಾತಿಗಣತಿ) ವರದಿ ಅವೈಜ್ಞಾನಿಕವಾಗಿದ್ದು ಸರಕಾರ ತಿರಸ್ಕರಿಸಬೇಕುʼ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪ ಗೌಡ ಒತ್ತಾಯಿಸಿದ್ದಾರೆ.

ಶುಕ್ರವಾರ ಇಲ್ಲಿನ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದಿಂದ 2014-15ರಲ್ಲಿ ಸಮೀಕ್ಷೆ ನಡೆಸಿದ್ದರು. ಮನೆ-ಮನೆಗೂ ಹೋಗಿ ಸರಿಯಾಗಿ ಮಾಹಿತಿ ಪಡೆದಿಲ್ಲ ಎಂಬ ಆರೋಪವಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸರಕಾರ ವರದಿಯನ್ನು ಅನುಷ್ಠಾನಗೊಳಿಸಬಾರದು ಎಂದು ಕೋರಿದರು.

ವರದಿ ಅನುಷ್ಠಾನ ವಿರೋಧಿಸಿ ಹಾಗೂ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲು ಜ.12ರಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಸಚಿವರು, ಶಾಸಕರು ಸೇರಿದಂತೆ ಪಕ್ಷಾತೀತ ಜನಪ್ರತಿನಿಧಿಗಳ ಸಭೆ ನಡೆಸಲಿದ್ದೇವೆ ಆ ಸಭೆಯಲ್ಲಿ ಜನಾಂಗದ ಹಿತ ಕಾಪಾಡುವ ನಿಟ್ಟಿನಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.

ಸಮೀಕ್ಷಾ ವರದಿಯು ನ್ಯೂನತೆಯಿಂದ ಕೂಡಿದೆ. 5.98 ಕೋಟಿ ಜನಸಂಖ್ಯೆ ರಾಜ್ಯದಲ್ಲಿ ಇದ್ದಾರೆಂದು ಹೇಳಲಾಗಿದೆ. ಆದರೆ ಆಧಾರ್ ಸಂಖ್ಯೆ ಪ್ರಕಾರ 7 ಕೋಟಿ ಜನಸಂಖ್ಯೆ ರಾಜ್ಯದಲ್ಲಿದೆ. ಇನ್ನೂ ಒಂದು ಕೋಟಿ ಜನಸಂಖ್ಯೆ ಸಮೀಕ್ಷೆಯಿಂದ ಹೊರಗುಳಿದಂತಾಗಿದೆ. ಒಕ್ಕಲಿಗ, ಲಿಂಗಾಯತ ಸೇರಿದಂತೆ ಹಲವು ಸಮುದಾಯಗಳಿಗೆ ಸಮೀಕ್ಷಾ ವರದಿ ಅನುಷ್ಠಾನದಿಂದ ಅನ್ಯಾಯವಾಗುತ್ತದೆ ಎಂದು ಅವರು ಆಕ್ಷೇಪಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪ ರೆಡ್ಡಿ ಮಾತನಾಡಿ, ಆಯೋಗದ ಮೂಲಕ 10 ವರ್ಷಕ್ಕೊಮ್ಮೆ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಬೇಕು. ಈಗಾಗಲೇ ಮಾಡಿರುವ ಸಮೀಕ್ಷೆಯಲ್ಲಿ ಶೇ.40ರಷ್ಟು ಮನೆಗಳಿಗೆ ಭೇಟಿಯನ್ನೇ ನೀಡಿಲ್ಲ. ಹೀಗಾಗಿ ಅವೈಜ್ಞಾನಿಕ ವರದಿಯಾಗಿದೆ. ಈ 10 ವರ್ಷಗಳಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ಮಳೆ-ಬೆಳೆಯಿಲ್ಲದೆ ರೈತಾಪಿ ಜನರು ಆದಾಯ ಕುಸಿತವಾಗಿ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ವರದಿ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್, ಎಲ್.ಶ್ರೀನಿವಾಸ್, ಸಹಾಯಕ ಕಾರ್ಯದರ್ಶಿ ಹನುಮಂತರಾಯಪ್ಪ, ಖಜಾಂಚಿ ನಲ್ಲಿಗೆರೆ ಬಾಲು, ನಿರ್ದೇಶಕರಾದ ಎಚ್‌ಸಿಸಿ ಜಯಮುತ್ತು, ಹನುಮಂತಯ್ಯ, ಮಾರೇಗೌಡ, ಆಂಜನಪ್ಪ, ಪ್ರಕಾಶ್, ವೆಂಕಟರಾಮೇಗೌಡ, ದೇವರಾಜು, ರಘುಗೌಡ, ಡಾ.ನಾರಾಯಣಸ್ವಾಮಿ, ಆಡಿಟರ್ ನಾಗರಾಜ್ ಯಲಚವಾಡಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News