ಜಾತಿ ಗಣತಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-01-11 05:35 GMT

 ಡಿ.ಕೆ.ಶಿವಕುಮಾರ್ | PC : PTI

ಬೆಂಗಳೂರು: ಜಾತಿ ಗಣತಿ ವಿಚಾರವನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ತಮ್ಮ ಸರಕಾರಿ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಬಳಿಕ ಶಿವಕುಮಾರ್ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.

ಜಾತಿ ಗಣತಿ ವಿರೋಧಿಸಿ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರ ಸಭೆ ನಡೆಯುವುದೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, "ನನಗೆ ಗೊತ್ತಿರುವ ಮಾಹಿತಿ ಪ್ರಕಾರ ಈ ಬಗ್ಗೆ ಯಾವುದೇ ಸಭೆ ಇಲ್ಲ. ಅದರ ಅಗತ್ಯವಿಲ್ಲ. ಮುಖ್ಯಮಂತ್ರಿ ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದು, ಅಲ್ಲಿ ನಾವು ಚರ್ಚೆ ಮಾಡುತ್ತೇವೆ" ಎಂದು ತಿಳಿಸಿದರು.

ಗಾಂಧಿ ಭಾರತ ಕಾರ್ಯಕ್ರಮ, 100 ಕಾಂಗ್ರೆಸ್ ಕಚೇರಿ ನಿರ್ಮಾಣದ ಬಗ್ಗೆ ಚರ್ಚೆ

ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಜ.21ರಂದು ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಹಾಗೂ 100 ಕಾಂಗ್ರೆಸ್ ಕಚೇರಿ ನಿರ್ಮಾಣದ ಬಗ್ಗೆ ಹಿರಿಯ ನಾಯಕರ ಸಭೆಯಲ್ಲಿ ಚರ್ಚಿಸಲಾಯಿತು" ಎಂದು ಡಿಕೆಶಿ ತಿಳಿಸಿದರು.

"ಈಗಾಗಲೇ 72 ಕಡೆ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಅರ್ಜಿ ಬಂದಿವೆ. ಉಳಿದ ಕಡೆಗಳು ಸೇರಿ 100 ಕಚೇರಿ ನಿರ್ಮಾಣ ಮಾಡಲಾಗುವುದು. ಸಚಿವರು ಪಕ್ಷದ ಹಿರಿಯ ನಾಯಕರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ಶಾಸಕರಿಗೂ ಬೇರೆ ಬೇರೆ ಜವಾಬ್ದಾರಿ ನೀಡಲಾಗಿದೆ" ಎಂದು ತಿಳಿಸಿದರು.

ಸರಕಾರದ ಬಗ್ಗೆ ಭವಿಷ್ಯ ನುಡಿಯವುದು ಬೇಡ

ಇದೇ ಅವಧಿಯಲ್ಲಿ ನೀವು ಸಿಎಂ ಆಗುತ್ತೀರಿ ಎಂಬ ವಿನಯ್ ಗುರೂಜಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ನಮ್ಮ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಸ್ವಾಮೀಜಿಗಳು ನಮ್ಮ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುವುದು ಬೇಡ ಎಂದು ಮನವಿ ಮಾಡುತ್ತೇನೆ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದರು.

ಪವರ್ ಶೇರಿಂಗ್ ಬಗ್ಗೆ ಚರ್ಚೆ ಆಗುತ್ತಿರುವಾಗ ಈ ಹೇಳಿಕೆ ಬಂದಿದೆ ಎಂದು ಕೇಳಿದಾಗ, "ಯಾವ ಪವರ್ ಇಲ್ಲ, ಶೇರು ಇಲ್ಲ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ" ಎಂದರು.

ನಾನು, ಸಿಎಂ ಚರ್ಚಿಸಿ ಸಿಎಲ್ ಪಿ ಸಭೆ

ಜ.13ರಂದು ಕರೆಯಲಾಗುವ ಸಿಎಲ್ ಪಿ ಸಭೆ ಬಗ್ಗೆ ಕೇಳಿದಾಗ, "ನಾನು ಹಾಗೂ ಮುಖ್ಯಮಂತ್ರಿ ಚರ್ಚೆ ಮಾಡಿಯೇ ಕರೆದಿದ್ದೇವೆ. ಅಂದು ಇಡೀ ದಿನ ಪಕ್ಷಕ್ಕೆ ಮುಡಿಪಾಗಿಡಬೇಕು ಎಂದು ಹೇಳಿ, ಅಂದಿನ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಪೂವರ್ವಾಹ್ನ 11 ಗಂಟೆಗೆ ಭಾರತ ಜೋಡೋ ಭವನದಲ್ಲಿ ಬ್ಲಾಕ್, ಜಿಲ್ಲಾ ಅಧ್ಯಕ್ಷರ ಸಭೆ ಕರೆಯಲಾಗಿದೆ. ಸಂಜೆ 4 ಗಂಟೆಗೆ ಪದಾಧಿಕಾರಿಗಳ ಸಭೆ ಕರೆದಿದ್ದೇವೆ. ಸಂಜೆ 6 ಗಂಟೆಗೆ ಶಾಸಕರು, ಸಚಿವರ ಸಭೆ ಮಾಡಿ ಜವಾಬ್ದಾರಿ ನೀಡಲಾಗುವುದು. 14ರಂದು ನಾನು ಹಾಗೂ ಸಿಎಂ ದಿಲ್ಲಿಗೆ ತೆರಳಲಿದ್ದು, 15ರಂದು ದಿಲ್ಲಿಯಲ್ಲಿ ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ ಮಾಡಲಾಗುವುದು" ಎಂದು ತಿಳಿಸಿದರು.

ತಮ್ಮ ಅನುಭವದ ಮೇಲೆ ಕುಮಾರಸ್ವಾಮಿ ಹೇಳಿಕೆ:

ಪ್ರತೀ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, "ನಮಗೆ ಈ ವಿಚಾರ ಗೊತ್ತಿಲ್ಲ. ಅವರು ತಮ್ಮ ಅನುಭವದ ಮೇಲೆ ಮಾತನಾಡುತ್ತಿರಬೇಕು" ಎಂದು ತಿಳಿಸಿದರು.

ಶತ್ರುಗಳ ನಾಶಕ್ಕೆ ಪೂಜೆ ಮಾಡಿಸಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, "ಅದು ಅವರ ಅನುಭವವಲ್ಲವೇ. ಅವರು ಕದ್ದು ಮುಚ್ಚಿ ಹೋಮ ಮಾಡುತ್ತಾರೆ. ನಾನು ಬಹಿರಂಗವಾಗಿ ಮಾಡುತ್ತೇನೆ. ದಿನ ಬೆಳಗಾದರೆ ನಾನು ದೇವರಿಗೆ ಪೂಜೆ ಮಾಡುತ್ತೇನೆ" ಎಂದರು.

ದೊಡ್ಡವರ ಬಗ್ಗೆ ಮಾತನಾಡುವುದು ಬೇಡ:

ನಮ್ಮ ಸಭೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ನನಗೆ ಈ ಬಗ್ಗೆ ಗೊತ್ತಿಲ್ಲ. ನಾವು ಯಾರನ್ನೂ ತಡೆದಿಲ್ಲ. ಅದರ ಅವಶ್ಯಕತೆ ನಮಗಿಲ್ಲ. ದೊಡ್ಡವರ ಬಗ್ಗೆ ಮಾತನಾಡುವುದು ಬೇಡ" ಎಂದು ತಿಳಿಸಿದರು.

ಡಿನ್ನರ್ ಸಭೆ ಬಗ್ಗೆ ಕೇಳಿದಾಗ, "ಯಾವ ಡಿನ್ನರ್ ಸಭೆಯೂ ಇಲ್ಲ" ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News