ಪರ್ಯಾಯ ಮಾಧ್ಯಮಕ್ಕೆ ಕಾಂಗ್ರೆಸ್ ಬೆಂಬಲಿಸಬೇಕು: ಡಾ.ಯತೀಂದ್ರ ಸಿದ್ದರಾಮಯ್ಯ
ಬೆಂಗಳೂರು : ಮುಖ್ಯವಾಹಿನಿ ಮಾಧ್ಯಮಗಳನ್ನು ದೂರವಿಟ್ಟು, ಪರ್ಯಾಯ, ಸ್ಥಳೀಯ ಮಾಧ್ಯಮಗಳನ್ನು ಹುಟ್ಟುಹಾಕಿ ಬೆಂಬಲಿಸುವುದು ಮಾತ್ರವಲ್ಲದೆ, ಅವುಗಳ ಸಲಹೆಗಳನ್ನು ಪಡೆಯಲು ಕಾಂಗ್ರೆಸ್ ಪಕ್ಷ ಮುಂದಾಗಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ಇಲ್ಲಿನ ಕುಮಾರಕೃಪಾದ ಗಾಂಧಿಭವನ ಸಭಾಂಗಣದಲ್ಲಿ ವೆಬ್ ಚಾನೆಲ್ ‘ಕನ್ನಡ ಪ್ಲಾನೆಟ್ ಸಮ್ಮಿಳನ-2025’ ಮತ್ತು ಭಾರತ ಸಂವಿಧಾನ ಸಂಭ್ರಮ-75 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮಗಳಲ್ಲಿ ಸರಿಯಾಗಿ ಕೆಲಸ ಮಾಡುವವರು, ಅಧಿಕಾರದಲ್ಲಿ ಇರುವವರನ್ನು ಪ್ರಶ್ನೆ ಮಾಡುವವರು ತೀರ ಕಡಿಮೆ ಆಗಿದ್ದಾರೆ. ಅದರಲ್ಲೂ ಕೋಮುವಾದ ಭಿತ್ತುವವರನ್ನು ಪ್ರಶ್ನಿಸುವರೇ ಇಲ್ಲದಂತೆ ಆಗಿದೆ.ಮುಖ್ಯವಾಹಿನಿ, ಪ್ರಧಾನ ಮಾಧ್ಯಮಗಳು ಕೇಂದ್ರ ಸರಕಾರದ ಪರ ನೇರವಾಗಿಯೇ ಕೆಲಸ ಮಾಡುತ್ತಿವೆ.ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷವೂ ಸ್ವಾತಂತ್ರ್ಯ ಮಾಧ್ಯಮಗಳನ್ನು ಬೆಂಬಲಿಸಬೇಕು. ಈ ಕುರಿತು ಪಕ್ಷದ ವೇದಿಕೆಗಳಲ್ಲೂ ಹೇಳಿದ್ದೇನೆ. ಕೆಲವರು ಗಂಭೀರವಾಗಿ ಪರಿಗಣಿಸಿದರೆ, ಕೆಲವರು ಮುಖ್ಯವಾಹಿನಗಳತ್ತ ಮುಖ ಮಾಡಿದ್ದಾರೆ ಎಂದರು.
ನಾಡೋಜ ಸಾಹಿತಿ, ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಚಲನಶೀಲತೆ ಇಲ್ಲದೆ ಇದ್ದರೆ ಯಾವುದೇ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಿರಂತರ ಚಲನಶೀಲತೆ ದೇಶವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತದೆ. ಭಾರತ ಚಲನಶೀಲವಾಗಿ ನಡೆದುಕೊಂಡು ಬಂದಿದೆ ಎಂಬುದು ನಿಜ. ಆದರೆ, ಅದೇ ಸಂದರ್ಭದಲ್ಲಿ ಪ್ರಬುದ್ಧ ಭಾರತ ನಿರ್ಮಾಣದ ಕನಸು ನನಸಾಗಿದೆಯೇ ಎಂಬ ಕುರಿತು ಚಿಂತನೆ ನಡೆಸಬೇಕು ಎಂದು ಹೇಳಿದರು.
ದೇಶದಲ್ಲಿ ಪ್ರಬುದ್ಧತೆ ಹಾಗೂ ಅಪ್ರಬುದ್ಧತೆ, ವಿಚಾರ ಹಾಗೂ ವಿಕಾರ, ವಿವೇಕ ಮತ್ತು ಅವಿವೇಕ, ಸತ್ಯ ಮತ್ತು ಅಸತ್ಯ, ವ್ಯಾಖ್ಯಾನ ಮತ್ತು ಅಪವ್ಯಾಖ್ಯಾನಗಳ ನಡುವಿನ ಅಂತರ ಕಡಿಮೆ ಆಗಿದೆ. ಇಂಥದೊಂದು ಬಿಕ್ಕಟ್ಟು ದೇಶದಲ್ಲಿ ಸೃಷ್ಟಿಯಾಗಿದೆ ಎಂದ ಅವರು, ಅಮಾಯಕ ಜನರಲ್ಲಿ ಇಂಥ ತಪ್ಪುಗಳು ಆದರೆ ಅದನ್ನು ನಾವು ಮನ್ನಿಸಬಹುದು. ಆದರೆ, ಪ್ರಜ್ಞಾವಂತರು ಅನ್ನಿಸಿಕೊಂಡವರೇ ಇಂತಹದೊಂದು ಬಿಕ್ಕಟ್ಟು ಸೃಷ್ಟಿಸುತ್ತಿರುವುದು ಆತಂಕಕಾರಿ ವಿಚಾರ ಎಂದು ತಿಳಿಸಿದರು.
ಪರಿಷತ್ತಿನ ಸದಸ್ಯ ಸುಧಾಮ ದಾಸ್ ಮಾತನಾಡಿ, ‘ಮನುಸ್ಮೃತಿ ಚಿಂತನೆಗಳು ದೇಶಕ್ಕೆ ರೋಗ ಇದ್ದಂತೆ, ಇಂತಹ ರೋಗ ಗುಣಪಡಿಸುವ ಔಷಧಿ ಸಂವಿಧಾನವೇ ಆಗಿದೆ ಎಂದು ನಮ್ಮ ಶಿಕ್ಷಕರು ಪಾಠ ಮಾಡಿದ್ದಾರೆ. ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಹಕ್ಕು ಆಗಿದ್ದು, ಇದನ್ನು ನಾವು ಉಳಿಸಿಕೊಳ್ಳದಿದ್ದರೆ ಮುಂದೆ ನಮ್ಮ ಜೀವನವೇ ಕಷ್ಟಕರ ಆಗುವ ಸ್ಥಿತಿ ತಲುಪಲಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ವಹಿಸಿದ್ದರು. ಕನ್ನಡ ಪ್ಲಾನೆಟ್ ಬಳಗದ ದಿನೇಶ್ ಕುಮಾರ್, ಹರ್ಷಕುಮಾರ್ ಕುಗ್ವೆ, ಅರುಣ್ ಚಕ್ರವರ್ತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.