ಬೆಂಗಳೂರು | ಹಸುಗಳ ಕೆಚ್ಚಲು ಕೊಯ್ದು ಅಮಾನವೀಯ ಕೃತ್ಯ; ಕಠಿಣ ಕ್ರಮಕ್ಕೆ ಬೊಮ್ಮಾಯಿ ಆಗ್ರಹ

Update: 2025-01-12 08:24 GMT

ಬಸವರಾಜ ಬೊಮ್ಮಾಯಿ

ಬೆಂಗಳೂರು : ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದಲ್ಲಿ ನಡೆದಿದೆ.

ನಿನ್ನೆ ತಡ ರಾತ್ರಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ರಸ್ತೆಯಲ್ಲಿ ಮಲಗಿದ್ದ ಹಸುಗಳ ಕೆಚ್ಚಲನ್ನು ಕೊಯ್ದು ದುಷ್ಕರ್ಮಿಗಳು ಪರಾರಿಯಾಗಿದ್ದು, ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. 

ಗಾಯಗೊಂಡಿರುವ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಹಸುಗಳು ಚಾಮರಾಜಪೇಟೆಯ ಕರ್ಣ ಎಂಬುವವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ದುರುಳರ ಕೃತ್ಯ ಅತ್ಯಂತ ಅಮಾವೀಯವಾಗಿದ್ದು, ಈ ಹೀನ ಕೃತ್ಯವನ್ನು ತೀರ್ವವಾಗಿ ಖಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗೋಮಾತೆಯನ್ನು ತಾಯಿಯಂತೆ ಪೂಜಿಸುವ ನಮಗೆಲ್ಲ ಈ ಕೃತ್ಯ ಅತ್ಯಂತ ಘಾಸಿಯುಂಟು ಮಾಡಿದೆ. ಸುಗ್ಗಿಯ ಹಬ್ಬ ಮಕರ ಸಂಕ್ರಾತಿಯ ಸಂದರ್ಭದಲ್ಲಿ ರಾಜ್ಯದ ರಾಜ್ಯಧಾನಿಯಲ್ಲಿಯೇ ಇಂತಹ ಅಮಾನವೀಯ ಕೆಲಸ ಮಾಡಿರುವ ಪುಂಡರಿಗೆ ಈ ಸರಕಾದಲ್ಲಿ ಯಾವುದೇ ಭಯ ಇಲ್ಲದಂತೆ ಕಾಣಿಸುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರ ಗೋವುಗಳಿಗೆ ಸರಿಯಾದ ರಕ್ಷಣೆ ನೀಡದಿರುವುದು, ಗೋಶಾಲೆಗಳಿಗೆ ಸರಿಯಾದ ಅನುದಾನ ನೀಡದೇ ನಿರ್ಲಕ್ಣ್ಯ ಮಾಡಿರುವುದರ ಪರಿಣಾಮ, ಇಂತಹ ಹೃದಯ ಹೀನ ಕೃತ್ಯಗಳು ನಡೆಯಲು ಪ್ರೇರಣೆ ನೀಡಿದಂತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮೂಕ ಪ್ರಾಣಿಗಳ ಮೇಲೆ ಮಾಡಿರುವ ಇಂತಹ ಕೃತ್ಯವನ್ನು ಅಂತಃಕರಣ ಇರುವವರು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಈ ಸರಕಾರಕ್ಕೆ ಗೋಮಾತೆಯ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ ಇಂತಹ ಹೇಯ ಕೃತ್ಯ ಮಾಡಿರುವ ಪುಂಡರನ್ನು ಪತ್ತೆ ಹಚ್ಚಿ ತಕ್ಷಣ ಬಂಧಿಸಿ, ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಗಾಯಗೊಂಡಿರುವ ಹಸುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News