ಹಸುಗಳ ಕೆಚ್ಚಲು ಕೊಯ್ದವರ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದರೆ ಕರಾಳ ಸಂಕ್ರಾಂತಿ ‌ಆಚರಣೆ: ಆರ್.ಅಶೋಕ್‌

Update: 2025-01-12 09:36 GMT

ಬೆಂಗಳೂರು : ಹಸುಗಳ ಕೆಚ್ಚಲು ಕೊಯ್ದವರ ವಿರುದ್ಧ ಸರಕಾರ ಕಠಿಣ ಕ್ರಮ ವಹಿಸದಿದ್ದರೆ, ರಾಜ್ಯದಾದ್ಯಂತ ಕರಾಳ ಸಂಕ್ರಾಂತಿ ಆಚರಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಎಚ್ಚರಿಕೆ ನೀಡಿದರು.

ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶ ಗೋವನ್ನು ಪವಿತ್ರ ಎಂದು ಪರಿಗಣಿಸಿದೆ. ಸಂಕ್ರಾಂತಿ ಹಬ್ಬದಲ್ಲೂ ಗೋವನ್ನು ಪೂಜಿಸಲಾಗುತ್ತದೆ. ಕಾಂಗ್ರೆಸ್ ಸರಕಾರ ಹೊಸ ವರ್ಷಕ್ಕೆ ಬೆಲೆ ಏರಿಕೆಯ ಕೊಡುಗೆ ನೀಡಿದೆ.‌ ಅದೇ ರೀತಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹಸುವಿನ ಕೆಚ್ಚಲು ಕೊಯ್ದುಹಾಕುವ ಕೊಡುಗೆಯನ್ನು ನೀಡಿದೆ. ಇಂತಹ ಜಿಹಾದಿ ಮನಸ್ಥಿತಿಯನ್ನು ನಾನು ಈವರೆಗೆ ನೋಡಿಲ್ಲ ಎಂದರು.

ನೂರಾರು ವರ್ಷಗಳಿಂದ ಚಾಮರಾಜಪೇಟೆಯಲ್ಲಿ ಪಶು ಆಸ್ಪತ್ರೆ ಇದೆ. ಈ ಭೂಮಿಯನ್ನು ವಕ್ಫ್ ಮಂಡಳಿಗೆ ಸೇರಿಸಲು ಪ್ರಯತ್ನ ನಡೆದಿತ್ತು. ಆಗ ಸರಕಾರದ ವಿರುದ್ಧ ಪ್ರತಿಭಟಿಸುವುದರ ಜೊತೆಗೆ, ಕೋರ್ಟ್ ಮೊರೆ ಹೋಗಲಾಯಿತು. ಪ್ರತಿಭಟನೆಯ ಸಮಯದಲ್ಲಿ ಇವೇ ಹಸುಗಳನ್ನು ತೋರಿಸಲಾಗಿತ್ತು. ಅದಕ್ಕಾಗಿಯೇ ಮಚ್ಚು, ಡ್ರ್ಯಾಗರ್ ಬಳಸಿ ಹಸುಗಳ ಕೆಚ್ಚಲು ಕೊಯ್ದು, ಕಾಲು ಕತ್ತರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರು ಮತಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತಾರೆ‌. ಆದರೆ ಯಾರಿಗೂ ಹಿಂದೂ ಧರ್ಮದ ಬಗ್ಗೆ ಶ್ರದ್ಧೆ ಇಲ್ಲ. ಹಿಂದೂಗಳಲ್ಲಿ ಭೀತಿ ಹುಟ್ಟಿಸಲು ಜಿಹಾದಿಗಳು ಹೀಗೆ ಮಾಡಿದ್ದರೂ ಕಾಂಗ್ರೆಸ್ ನಾಯಕರು ಇದನ್ನು ಖಂಡಿಸುವುದಿಲ್ಲ. ಈಗ ಯಾವ ಮುಖ ಇಟ್ಟುಕೊಂಡು ಸಂಕ್ರಾಂತಿ ಆಚರಣೆ ಮಾಡುತ್ತಾರೆ? ಸರಕಾರ ಕ್ರಮ ಕೈಗೊಳ್ಳದಿದ್ದರೆ ಕರಾಳ ಸಂಕ್ರಾಂತಿ ಆಚರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಭಾಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದರೆ ಅದನ್ನು ಕಿತ್ತುಕೊಂಡು ಹೋಗುತ್ತಾರೆ. ಈಗ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ. ಎಸಿಪಿ ಜೊತೆ ಮಾತಾಡಿದ್ದು, ತಕ್ಷಣ ಕ್ರಮ ವಹಿಸುವಂತೆ ಸೂಚಿಸಿದ್ದೇನೆ. ಇಲ್ಲವಾದರೆ ತೀವ್ರವಾದ ಪ್ರತಿಭಟನೆ ಮಾಡುತ್ತೇವೆ. ಕಾಂಗ್ರೆಸ್ ಸಚಿವರು, ಮುಖ್ಯಮಂತ್ರಿ ಈ ಕಡೆ ತಿರುಗಿಯೂ ನೋಡಲ್ಲ ಎಂದರು.

ಒಂದು ಹಸು 20 ಲೀಟರ್ ಹಾಲು ನೀಡುತ್ತಿತ್ತು. ಈಗ ಯಾವುದೇ ಹಸುಗಳು ಬದುಕುವ ಸ್ಥಿತಿಯಲ್ಲೇ ಇಲ್ಲ. ಪಶು ಸಂಗೋಪನೆ ಮಾಡುವವರಿಗೆ ನಾವು ಕೂಡ ಸಹಾಯ ಮಾಡುತ್ತೇವೆ. ಸರಕಾರ ಕೂಡ ನೆರವು ನೀಡಬೇಕೆಂದು ಆಗ್ರಹಿಸಿದರು.

ಮಾದಕ ವಸ್ತು ದಂಧೆ; ಸರಕಾರ ಕ್ರಮ ಕೈಗೊಂಡಿಲ್ಲ :

ಚಾಮರಾಜಪೇಟೆಯಲ್ಲಿ ಮಾದಕ ವಸ್ತು ದಂಧೆ ನಡೆಯುತ್ತಿದೆ. ಆಸ್ಪತ್ರೆ, ಮೆಡಿಕಲ್ ಸ್ಟೋರ್ ಗಳಲ್ಲಿ ಮಾತ್ರೆ, ಔಷಧಿಗಳನ್ನು ಮಾದಕ ವಸ್ತುಗಳಾಗಿ ಬಳಸಲಾಗುತ್ತಿದೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದೆ. ಆದರೂ ಸರಕಾರ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News