ನಕ್ಸಲ್‍ರ ಶರಣಾಗತಿಗೆ ಸಹಕರಿಸಿದವರಿಗೆ ಧನ್ಯವಾದ : ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ
ಬೆಂಗಳೂರು : ಎರಡು ದಶಕಗಳಿಂದ ಭೂಗತ ಸಶಸ್ತ್ರ ಹೋರಾಟ ನಡೆಸುತ್ತಿದ್ದ 6 ಜನ ನಕ್ಸಲ್‍ರನ್ನು ಮುಖ್ಯವಾಹಿನಿಗೆ ಕರೆ ತರಲು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಗೆ ಸಹಕರಿಸಿದ ಎಲ್ಲರಿಗೂ ಸಮಿತಿಯು ಧನ್ಯವಾದ ಸಲ್ಲಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ಪ್ರಮುಖರೂ ಆದ ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ಸಮಿತಿ ಉದ್ದೇಶ ಸಫಲವಾಗುವಲ್ಲಿ ರಾಜ್ಯ ಸರಕಾರದ ದೂರದೃಷ್ಟಿ ಮತ್ತು ಸಾಮಾಜಿಕ ಕಾಳಜಿಗಳು ಪರಿಣಾಮ ಬೀರಿದೆ. ಹೊಸ ಶರಣಾಗತಿಯ ನೀತಿಗಳು ಮತ್ತು ಪ್ಯಾಕೇಜ್ ಮುಂತಾದ ಸಂಗತಿಗಳು ಭಾರತ ಒಕ್ಕೂಟದಲ್ಲಿ ವಿಶಿಷ್ಟವಾಗಿದ್ದು, ಇದು ಸ್ಪಷ್ಟರೂಪ ತಾಳುವಲ್ಲಿ ಆಗಿನ ಎಡಿಜಿಪಿಯಾಗಿದ್ದ ಶರತ್‍ಚಂದ್ರರ ಪಾತ್ರ ಮಹತ್ವದ್ದಾಗಿದೆ. ಹೊಸ ಶರಣಾಗತಿ ನೀತಿಗಳು ಸಮಿತಿಯ ಸದಸ್ಯರ ಪ್ರಯತ್ನಕ್ಕೆ ಬಲ ನೀಡಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಗೃಹ ಇಲಾಖೆಯ ಉನ್ನತ ಅಧಿಕಾರಿ ಹೇಮಂತ್ ನಿಂಬಾಳ್ಕರ್, ನಕ್ಸಲ್ ಕಾರ್ಯಾಚರಣೆ ಹಾಗೂ ಗೂಢಚರ್ಯೆ ವಿಭಾಗದ ಮುಖ್ಯಸ್ಥ ಅಧಿಕಾರಿ ಹರಿರಾಮ್ ಶಂಕರ್, ಪೊಲೀಸ್ ಅಧಿಕಾರಿ ವೆಂಕಟೇಶ್ ಪ್ರಸನ್ನ, ರಾಜ್ಯ ಸರಕಾರದ ಅಧಿಕಾರಿ ವರ್ಗದ ಶಾಲಿನಿ ರಜನೀಶ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮತ್ತು ಭೂಗತ ಹೋರಾಟ ನಡೆಸುತ್ತಿದ್ದ ಮಾವೋವಾದಿ ನಕ್ಸಲರು ಸಶಸ್ತ್ರ ಹೋರಾಟದ ಹಾದಿಯನ್ನು ತ್ಯಜಿಸಿ ಮುಖ್ಯ ವಾಹಿನಿಗೆ ಬರಬೇಕೆಂದು ನಿರ್ಧರಿಸಿದ್ದೂ ಕೂಡ ಮಹತ್ವದ ಬೆಳವಣಿಗೆಗೆ ಪ್ರಧಾನ ಕಾರಣವಾಗಿದೆ ಎಂದುಹೇಳಿದ್ದಾರೆ.
ಅದು ಅಲ್ಲದೇ ಸಮಿತಿಗೆ ಸಹಕರಿಸಿದ ಮೈಸೂರಿನ ಸ್ವಾಮಿ ಆನಂದ್, ಅಲಿ, ರಾಯಚೂರಿನ ಅಂಬಣ್ಣ ಅರೋಲಿಕರ್, ಬೆಂಗಳೂರಿನ ಆಶಾ, ನೂರ್ ಶ್ರೀಧರ್, ಶಾಂತಿಗಾಗಿ ನಾಗರಿಕರ ವೇದಿಕೆಯ ವಿ.ಎಸ್.ಶ್ರೀಧರ್, ಮೋಹನ್ ಕುಮಾರ್, ಪತ್ರಕರ್ತ ಸುರೇಶ್ ಬಿಳಿಗೇರಿ, ಮಾಜಿ ನಕ್ಸಲ್ ಶಿವು, ಚಿಕ್ಕಮಗಳೂರಿನ ಯಶೋಧ, ಬಾಳೆಹೊಳೆಯ ಉಮೇಶ್, ಸುಳ್ಯದ ಹಿಮಕರ, ಹಾಲಗಂಚಿ ವೆಂಕಟೇಶ್, ಹಾವೇರಿಯ ಶಿವಲಿಂಗಮ್, ಕೊಪ್ಪದ ನೀಲಗುಳಿ ಪದ್ಮನಾಭ, ನಂದಕುಮಾರ್, ಬೆಳ್ತಂಗಡಿ ಕುತ್ಲೂರು ಸುರೇಶ್, ಮೇಗದ್ದೆಯ ಸುಗುಣ ಮತ್ತು ಪ್ರವೀಣ್ ಇವರಿಗೆ ಸಮಿತಿಯು ಧನ್ಯವಾದಗಳನ್ನು ಹೇಳಿದೆ.
ಪುನರ್ವಸತಿಗೆ ಸಂಬಂಧಿಸಿದ ನಿಯಮಗಳ ಅನುಸಾರ ಮುಖ್ಯ ವಾಹಿನಿಗೆ ಬರುತ್ತಿರುವವರಿಗೆ ಸರಕಾರ ನೀಡಿರುವ ಭರವಸೆಗಳು ತಲುಪುತ್ತವೆ ಎಂಬ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಸಮಿತಿಯು ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ. ಇದರೊಂದಿಗೆ, ಈ ಹಿಂದೆ ಮುಖ್ಯವಾಹಿನಿಗೆ ಬಂದವರ ಸವಲತ್ತುಗಳ ಕುರಿತಂತೆಯೂ ಸಮಿತಿಯು ಮುಂದಿನ ದಿನಗಳಲ್ಲಿ ಸರಕಾರದೊಂದಿಗೆ ಸಮನ್ವಯ ಸಾಧಿಸಿ ನಿಯಮಾನುಸಾರ ಕೆಲಸ ಮಾಡಲು ಬದ್ಧವಾಗಿದೆ.
ಇನ್ನೂ, ವಿಕ್ರಮ್ ಗೌಡ ಸಾವಿನ ಕುರಿತು ತನಿಖೆ ನಡೆಸಬೇಕೆಂಬ ನಿಲುವನ್ನು ಸಮಿತಿಯು ಪುನಃ ಆಗ್ರಹಿಸುತ್ತದೆ. ನಕ್ಸಲ್ ಹೋರಾಟವು ನಡೆದಿದ್ದ ಕಲ್ಯಾಣ ಕರ್ನಾಟಕದ ಮತ್ತು ಪಶ್ಚಿಮಘಟ್ಟ ಪ್ರದೇಶದ ಜನಜೀವನದ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರಕಾರ ಅಗತ್ಯ ಸುಧಾರಣೆಯ ಕ್ರಮಗಳನ್ನು ವಹಿಸಬೇಕು ಎಂದೂ ಅವರು ಪ್ರಕಟನೆಯಲ್ಲಿ ಉಲ್ಲೇಖಿಸಿದ್ದಾರೆ.