ಸರಕಾರದಿಂದ 350 ಕೋಟಿ ರೂ ಬಾಕಿ; ಕಿಯೋನಿಕ್ಸ್‌ ವೆಂಡರ್ಸ್‌ಗಳಿಂದ ದಯಾಮರಣಕ್ಕೆ ಮನವಿ

Update: 2025-01-14 14:34 GMT

ಸಿದ್ದರಾಮಯ್ಯ | PTI

ಬೆಂಗಳೂರು: ರಾಜ್ಯ ಸರಕಾರ ಸವಾಲುಗಳ ಮೇಲೆ ಸವಾಲುಗಳನ್ನು ಎದುರಿಸುತ್ತಿದ್ದು, ಇದೀಗ ಕಿಯೋನಿಕ್ಸ್ ಸಂಸ್ಥೆಯ ಗುತ್ತಿಗೆದಾರರು ಮತ್ತು ವೆಂಡರ್ಸ್ ಸೇರಿ ತಮಗೆ ದಯಾಮರಣ ಕೊಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಸರಕಾರ ಕಿಯೋನಿಕ್ಸ್  ಸಂಸ್ಥೆಗೆ 350 ಕೋಟಿ ರೂ. ಗುತ್ತಿಗೆ ಹಣ ಬಾಕಿ ಉಳಿಸಿಕೊಂಡಿದ್ದು, ಕಿಯೋನಿಕ್ಸ್ ಸಂಸ್ಥೆ ವೆಂಡರ್ಸ್ ಅಸೋಸಿಯೇಷನ್‌ಗೆ ರಾಜ್ಯ ಸರಕಾರ ಬಾಕಿ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಜೀವನ ಮಾಡುವುದೇ ದುಸ್ತರವಾಗಿದ್ದು, ತಮಗೆ ದಯಾಮರಣ ಕೊಡುವಂತೆ ಮನವಿ ಪತ್ರ ಬರೆದಿದ್ದಾರೆ.

ಕಳೆದ ಒಂದು ವರ್ಷದಿಂದ ಸರಕಾರಕ್ಕೆ ‌ಮನವಿ‌ ಮಾಡಿದರೂ ನಮಗೆ ಬಾಕಿ ಬಿಲ್ ಪಾವತಿಯಾಗುತ್ತಿಲ್ಲ. ಕಳೆದ ವರ್ಷ ಬಾಕಿ ‌ಬಿಲ್ ಬಿಡುಗಡೆ ‌ಮಾಡುವಂತೆ ಪ್ರತಿಭಟನೆ ಮಾಡಿದ್ದರೂ, ನಮಗೆ ಯಾವುದೇ ಭರವಸೆಯನ್ನೂ ನೀಡಲಿಲ್ಲ. ಒಂದು ವರ್ಷಗಳ ಕಾಲ ಕಾದರೂ ಬಾಕಿ ಬಿಲ್ ಬಿಡುಗಡೆ ಮಾಡುತ್ತಿಲ್ಲ. ಕಿಯೋನಿಕ್ಸ್ ವೆಂಡರ್ಸ್‌ಗಳು ಭಾರೀ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಕಷ್ಟದಲ್ಲಿ ನಾವು ಜೀವನ ಸಾಗಿಸುತ್ತಾ, ನಮ್ಮನ್ನು ನಂಬಿಕೊಂಡು ಕೆಲಸ ಮಾಡಿದವರಿಗೂ ಹಣ ಕೊಡಲು ಸಾಧ್ಯವಾಗದೇ ಪರದಾಡುತ್ತಿದ್ದೇವೆ. ಹೀಗಾಗಿ, ದಯಾಮರಣ ಕೊಡಿ, ಇಲ್ಲವೇ ಬಾಕಿ ಬಿಲ್ ಬಿಡುಗಡೆಗೆ ರಾಜ್ಯ ಸರಕಾರದ ಮೇಲೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ಹೊಣೆ : ಇನ್ನು ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಕೋರಿದ ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ಪತ್ರದಲ್ಲಿ ನಮ್ಮ ಸಂಸ್ಥೆಯ ವೆಂಡರ್ಸ್‌ಗಳು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ, ಕಿಯೋನಿಕ್ಸ್ ಸಿಇಓ ಪವನ್ ಕುಮಾರ್ ಹಾಗೂ ಕಿಯೋನಿಕ್ಸ್ ಹಣಕಾಸು ವಿಭಾಗದ ನಿಶ್ಚಿತ್ ಅವರೇ ನೇರವಾಗಿ ಹೊಣೆಗಾರರಾಗುತ್ತಾರೆ. ಕಳೆದ ಒಂದು ವರ್ಷದಿಂದ ತನಿಖೆಯ ನೆಪದಲ್ಲಿ ಬಿಲ್ ಬಿಡುಗಡೆ ಮಾಡದೇ ಕಿರುಕುಳ ನೀಡಲಾಗುತ್ತಿದೆ  ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News