ಮುನಿರತ್ನ ಹೇಳಿಕೆ ಖಂಡಿಸಿ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಬೆಂಗಳೂರು : ಶಾಸಕ ಮುನಿರತ್ನ ದಲಿತ ಹಾಗೂ ಒಕ್ಕಲಿಗ ಸಮುದಾಯವನ್ನು ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಿರುವುದನ್ನು ಖಂಡಿಸಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಕೆಂಗೇರಿ ಸ್ಯಾಟಲೈಟ್ ಟೌನ್ ನ ಹೊಯ್ಸಳ ಸರ್ಕಲ್ ನಿಂದ ಗಣೇಶ ಮೈದಾನದವರೆಗೆ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಾತಿನಿಂದನೆ ಮತ್ತು ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಂಧಿಸಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಾತಿ ನಿಂದನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಆಡಿಯೊದಲ್ಲಿನ ಮುನಿರತ್ನ ಅವರ ಮಾತುಗಳು ಕೇವಲ ಅವರೊಬ್ಬರ ವೈಯಕ್ತಿಕ ಹೇಳಿಕೆಯಲ್ಲ, ಸಮಸ್ತ ಬಿಜೆಪಿಗರ ಮನಸ್ಥಿತಿಯ ಪ್ರತಿರೂಪ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರತಿಭಟನಾಕಾರರು ಖಂಡಿಸಿದರು.
ವೈರಲ್ ಆಗಿರುವ ಆಡಿಯೋದಲ್ಲಿ ಮುನಿರತ್ನ ಅವರು ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ, ಮನಸೋ ಇಚ್ಛೆ ನಿಂದಿಸಿದ್ದಾರೆ. ಗುತ್ತಿಗೆದಾರನಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ಕೊನೆಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇಂಥ ಭ್ರಷ್ಟ ಶಾಸಕನನ್ನು ಬಿಜೆಪಿಯು ಪಕ್ಷದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಸೇರಿದಂತೆ ಸಾವಿರಾರು ಮಹಿಳೆಯರು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಶಾಸಕ ಮುನಿರತ್ನ ಮನಸೋ ಇಚ್ಚೆ ಮಾತಾಡಿದ್ದಾರೆ. ಮುನಿರತ್ನ ವಿರುದ್ದ ಯಾರಾದರೂ ಮಾತಾಡಲಿ ಬಿಡಲಿ, ನಾವು ಅವರ ಹೇಳಿಕೆಯನ್ನು ಖಂಡಿಸುತ್ತೇವೆ. ನನ್ನ ಕ್ಷೇತ್ರದ ಒಕ್ಕಲಿಗ, ದಲಿತ ಸಮುದಾಯದವರ ಮನವಿ ಮೇರೆಗೆ ಪ್ರತಿಭಟನೆಗೆ ಬಂದಿದ್ದೇನೆ. ಯಾವ ರಾಜಕಾರಣಿ ಕೂಡ ಇಷ್ಟು ಕೀಳಾಗಿ ಮಾತಾಡಿರಲಿಲ್ಲ. ಹಿಂದೆ ನಾನು, ಬೈರತಿ ಬಸವರಾಜ್, ಮುನಿರತ್ನ ಜೊತೆಯಲ್ಲೇ ಇದ್ದೆವು, ಆಗ ಈ ರೀತಿ ಮಾತಾಡಿರಲಿಲ್ಲ.
- ಎಸ್.ಟಿ. ಸೋಮಶೇಖರ್, ಬಿಜೆಪಿ ಶಾಸಕ