ಬೆಂಗಳೂರು | ಪೌರಕಾರ್ಮಿಕರಿಗೆ ಮೇಲೆ ದೈಹಿಕ ಹಲ್ಲೆ ಖಂಡಿಸಿ ಪ್ರತಿಭಟನೆ
ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯ ಐದು ಮಹಿಳಾ ಪೌರಕಾರ್ಮಿಕರ ಮೇಲೆ ನಡೆದ ದೈಹಿಕ ಹಲ್ಲೆ ಮತ್ತು ಜಾತಿ ದೌರ್ಜನ್ಯವನ್ನು ಖಂಡಿಸಿ ನೂರಾರು ಪೌರಕಾರ್ಮಿಕರು ಬಿಬಿಎಂಪಿ ಕಚೇರಿಯ ಆವರಣದಲ್ಲಿ ಬುಧವಾರದಂದು ಪ್ರತಿಭಟನೆ ನಡೆಸಿದ್ದಾರೆ.
ಬಿಬಿಎಂಪಿಯ ವಾರ್ಡ್ ಸಂಖ್ಯೆ 72ರ ವ್ಯಾಪ್ತಿಯಲ್ಲಿ ಬರುವ ಭಾರತ್ ನಗರದಲ್ಲಿ ಸೆ.11 ರಂದು ನಿವಾಸಿಗಳಿಬ್ಬರಿಂದ ಐದು ಮಹಿಳಾ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಪೌರಕಾರ್ಮಿಕರು ಒತ್ತಾಯಿಸಿದರು.
ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಇಂತಹ ಘಟನೆಗಳು ಮುಂದೆ ನಡೆಯದಂತೆ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಲ್ಲ ಪೌರಕಾರ್ಮಿಕರಿಗೆ ಸುರಕ್ಷಿತ ಮತ್ತು ಗೌರವಯುತ ಕೆಲಸದ ಪರಿಸ್ಥಿತಿಗಳನ್ನು ಒದಗಿಸಲು ಬಿಬಿಎಂಪಿ ಪೌರಕಾರ್ಮಿಕರ ಸುರಕ್ಷತೆ ಮತ್ತು ಘನತೆ ನೀತಿಯನ್ನು ಜಾರಿಗೊಳಿಸಬೇಕು ಎಂದು ಪೌರಕಾರ್ಮಿಕರು ಆಗ್ರಹಿಸಿದರು.
ಬಿಬಿಎಂಪಿಯ ಅಗತ್ಯ ಸೇವೆಗಳನ್ನು ನಿರ್ವಹಿಸುವ ಈ ಶ್ರಮಜೀವಿಗಳಿಗೆ ಎಂತಹ ಘೋರ ಅಪಮಾನ ಮತ್ತು ಅಸ್ಪೃಶ್ಯತೆ ನಡೆಯುತ್ತಿದ್ದರೂ ಬಿಬಿಎಂಪಿ ಮೌನ ವಹಿಸುತ್ತಿದೆ. ಹಲ್ಲೆ ಹಾಗೂ ದೌರ್ಜನ್ಯಕ್ಕೆ ಒಳಗಾದ ಪೌರಕಾರ್ಮಿಕರಿಗೆ ತಲಾ 10ಲಕ್ಷ ರೂ. ಪರಿಹಾರ ಕೊಡಬೇಕು. ಹಿಂಸಾತ್ಮಕ ದಾಳಿ ಮತ್ತು ಕಿರುಕುಳದಿಂದ ಪೌರಕಾರ್ಮಿಕರನ್ನು ರಕ್ಷಿಸುವುದು ಬಿಬಿಎಂಪಿಯ ಆದ್ಯ ಕರ್ತವ್ಯವಾಗಬೇಕು ಎಂದು ಪೌರಕಾರ್ಮಿಕರು ಆಗ್ರಹಿಸಿದರು.
ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತೆ ಪ್ರತಿಭಾ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಆರೋಪಿಗಳ ಬಂಧನಕ್ಕೆ ಪೊಲೀಸರೊಂದಿಗೆ ಚರ್ಚೆ ಮಾಡಲಾಗುತ್ತದೆ. ಭವಿಷ್ಯದ ಘಟನೆಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
"ಜಾತಿ ಆಧಾರಿತ ತಾರತಮ್ಯವನ್ನು ನಿವಾರಿಸಲು ಮತ್ತು ಪೌರಕಾರ್ಮಿಕರಿಗೆ ಗೌರವಾನ್ವಿತ ಕೆಲಸದ ವಾತಾವರಣವನ್ನು ಒದಗಿಸಲು ಬಿಬಿಎಂಪಿ ಸೂಕ್ತ ನೀತಿಯನ್ನು ರೂಪಿಸುವ ಕೆಲಸ ಮಾಡುತ್ತದೆ"
- ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ