ಮುನಿರತ್ನ ವಿರುದ್ಧ ಕಠಿಣ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

Update: 2024-09-19 15:35 GMT

ಬೆಂಗಳೂರು : ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅಮಾನತುಗೊಳಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ನಗರದ ಕೆಪಿಸಿಸಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಮುನಿರತ್ನ ಕಾಮುಕನಾಗಿದ್ದು, ಅತ್ಯಾಚಾರಿ, ಹನಿಟ್ರ್ಯಾಪ್‍ನ ರೂವಾರಿಯಾಗಿದ್ದಾನೆ. ಗುತ್ತಿಗೆದಾರರನ್ನು ಶೋಷಣೆ ಮಾಡಿದ್ದು, ಹಣ ವಸೂಲಿ ಮಾಡಿದ್ದಾನೆ. ಗುತ್ತಿಗೆದಾರರ ಜೊತೆ ಸಂಭಾಷಣೆಯಲ್ಲಿ ಹೆಣ್ಣುಮಕ್ಕಳ ವಿಷಯವಾಗಿ, ಪರಿಶಿಷ್ಟರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾನೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಮುನಿರತ್ನ ಒಬ್ಬ ಗೂಂಡಾ ಶಾಸಕನಾಗಿದ್ದು, ಆತನ ಬಗ್ಗೆ ದೂರು ನೀಡಲು ಕೂಡ ಭಯ ಪಡುವ ವಾತಾವರಣವಿದೆ. ಹೀಗಾಗಿ ಬಹಳಷ್ಟು ಮಂದಿ ದೂರು ನೀಡಲು ಮುಂದೆ ಬಂದಿಲ್ಲ. ಇಂತಹ ನಾಚಿಕೆಗೆಟ್ಟ ಶಾಸಕನನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಬಿಜೆಪಿ ನಾಯಕರ ನೈತಿಕತೆ ಕೂಡ ಪ್ರಶ್ನಾರ್ಹವಾಗಿದೆ. ಆತನನ್ನು ಗೆಲ್ಲಿಸಿದ ರಾಜರಾಜೇಶ್ವರಿ ನಗರ ಕ್ಷೇತ್ರದ ಜನ ತಲೆತಗ್ಗಿಸುವಂತಾಗಿದೆ ಎಂದು ಜಿ.ಸಿ.ಚಂದ್ರಶೇಖರ್ ತಿಳಿಸಿದರು.

ವಿಧಾನಪರಿಷತ್‍ನ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಬಿಜೆಪಿಗೆ ನೈತಿಕತೆ ಇದ್ದರೆ ಕೂಡಲೇ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ಪಕ್ಷದ ಹಿರಿಯ ನಾಯಕ ಆರ್.ಅಶೋಕ್ ವಿರುದ್ಧವೇ ಹನಿಟ್ರ್ಯಾಪ್ ಪ್ರಯೋಗ ನಡೆಸಲಾಗಿತ್ತು ಎಂದರೆ ಮುನಿರತ್ನ ಅವರ ಮನಸ್ಥಿತಿ ಅರ್ಥವಾಗುತ್ತದೆ. ಬಿಜೆಪಿ ಮುನಿರತ್ನನನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News