ಗೌರವ ಧನ ಹೆಚ್ಚಳ, ಗ್ರ್ಯಾಚುಟಿ ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ
ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ನಿವೃತ್ತಿ ಉಪಧನ ಗ್ರಾಚ್ಯುಟಿ ಸೌಲಭ್ಯ ಹಾಗೂ ಗೌರವ ಧನ ಇಡುಗಂಟು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನ್ವಯ ಇದೀಗ ನೀಡಲಾಗುತ್ತಿರುವ ಗೌರವ ಸಂಭಾವನೆಯಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ ನೀಡಲಾಗಿದ್ದ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ಹಾಗೂ ಸಹಾಯಕಿಯರಿಗೆ 10ಸಾವಿರ ರೂ.ಗೌರವಧನ ಹೆಚ್ಚಿಸುವ ಭರವಸೆಯನ್ನು ಕೂಡಲೇ ಈಡೇರಿಸಬೇಕು. ಹಾಗೂ ನಿವೃತ್ತರಾದವರಿಗೆ 3ಲಕ್ಷ ರೂ.ಇಡುಗಂಟು ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ದೇಶದಲ್ಲಿ ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಎದುರಿಸುತ್ತಿರುವ ಅಪೌಷ್ಠಿಕತೆ, ರಕ್ತಹೀನತೆ, ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕು ಹಿನ್ನೆಲೆಯಲ್ಲಿ ಇಂದಿರಾಗಾಂಧಿ 20 ಅಂಶಗಳ ಕಾರ್ಯಕ್ರಮಗಳಲ್ಲಿ ಶಿಶು ಅಭಿವೃದ್ಧಿ ಯೋಜನೆ ಪರಿಣಾಮಕಾರಿಯಾಗಿದೆ. ಶಿಶು ಅಭಿವೃದ್ಧಿ ಯೋಜನೆಯ ಪ್ರಗತಿಯ ಬಗ್ಗೆ ಹಾಗೂ ಮಹತ್ವದ ಬಗ್ಗೆ ದೇಶದ ಸುಪ್ರೀಂ ಕೋರ್ಟ್ ಪರಿಗಣಿಸಿರುವುದು ಅಭಿನಂದನೀಯ ಎಂದು ತಿಳಿಸಿದರು.
ಇದೇ ವೇಳೆ ಧರಣಿ ಸ್ಥಳಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ನಿರ್ದೇಶಕರು, ಮಹಿಳಾ ಮತ್ತು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಮನವಿ ಸ್ವೀಕರಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಅಧ್ಯಕ್ಷ ಬಿ.ಅಮ್ಜದ್, ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ, ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಕೆ.ಸೋಮಶೇಖ ರ್ಯಾದಗಿರಿ, ಪ್ರಧಾನ ಕಾರ್ಯದರ್ಶಿ ಎಂ.ಉಮಾದೇವಿ ಮತ್ತಿತರರು ಉಪಸ್ಥಿತರಿದ್ದರು.