ನಾಗಮಂಗಲ ಪರಿಸ್ಥಿತಿ ಹತೋಟಿಗೆ ಬಂದಿದೆ, ಮತ್ತೆ ದ್ವೇಷ ಕೆರಳಿಸುವುದು ಬೇಡ : ಎಚ್.ಡಿ.ಕುಮಾರಸ್ವಾಮಿ
ಮಂಡ್ಯ/ನಾಗಮಂಗಲ : ಗಲಭೆಪೀಡಿತ ನಾಗಮಂಗಲದಲ್ಲಿ ಶಾಂತಿ ನೆಲೆಸುತ್ತಿದ್ದು, ಸಹಜ ವಾತಾವರಣ ಮರುಸ್ಥಾಪನೆ ಆಗುತ್ತಿದೆ. ಹೀಗಾಗಿ ಯಾರನ್ನೂ ಬಂಧಿಸುವ ಕೆಲಸ ಮಾಡಬಾರದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಗುರುವಾರ ಸಂಜೆ ನಾಗಮಂಗಲದ ಬದರಿಕೊಪ್ಪಲುಗೆ ಭೇಟಿ ನೀಡಿದ ಸಚಿವರು, ಗಣೇಶಮೂರ್ತಿ ಗಲಾಟೆ ಹಿನ್ನೆಯಲ್ಲಿ ತಮ್ಮ ಮಕ್ಕಳ ಬಗ್ಗೆ ಆತಂಕಗೊಂಡಿರುವ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಅವರೊಂದಿಗೆ ಸ್ಥಳದಿಂದಲೇ ದೂರವಾಣಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಮೊದಲಿನ ವಾತಾವರಣವೇ ನೆಲೆಸಿದೆ. ಶಾಂತಿ ಸ್ಥಾಪನೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಯಾರನ್ನಾದರೂ ಬಂಧಿಸುವ ಕೆಲಸ ಆದರೆ ಮತ್ತೆ ಅಶಾಂತಿ ಉಂಟಾಗುವ ಅಪಾಯವಿದೆ. ಆದ್ದರಿಂದ ಸೂಕ್ಷ್ಮವಾಗಿ ವರ್ತಿಸಿ ಹಾಗೂ ಯಾರನ್ನೂ ಬಂಧಿಸಬೇಡಿ ಎಂದು ಸೂಚಿಸಿದರು.
ಯಾವುದೇ ತಪ್ಪು ಮಾಡದೇ ಜೈಲು ಪಾಲಾಗಿರುವ ಅಮಾಯಕರನ್ನು ಬಿಡುಗಡೆ ಮಾಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಅಧೈರ್ಯಪಡಬೇಡಿ. ನಿಮ್ಮ ಜೊತೆ ನಾವಿದ್ದೇವೆ. ಜೈಲಿಗೆ ಹೋಗಿರುವವರನ್ನು ಕಾನೂನಿನ ವ್ಯಾಪ್ತಿಯಲ್ಲಿ ಜಾಮೀನು ಕೊಡಿಸೋಕು ಮುಂದಾಗುತ್ತೇವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಎಲ್ಲರೂ ಶಾಂತಿಯಿಂದ ವರ್ತಿಸಬೇಕು. ವೈಷಮ್ಯ ಯಾರಿಗೂ ಒಳ್ಳೆಯದಲ್ಲ. ಜೈಲಿನ ಮುಂದೆ ಈ ಗ್ರಾಮದ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿವುದನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಅದಕ್ಕೆ ಮತ್ತೆ ಇಲ್ಲಿಗೆ ಬಂದಿದ್ದೇನೆ. ಅಲ್ಲದೆ, ನೊಂದ ತಂದೆ ತಾಯಿಗೆ ಆರ್ಥಿಕ ಸಹಾಯ ಮಾಡಲು ಬಂದಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಚಿವರು ಸುಮಾರು ಹದಿನೇಳಕ್ಕೂ ಹೆಚ್ಚು ಮಂದಿಗೆ ಹಣಕಾಸು ನೆರವು ನೀಡಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಎಫ್ಐಆರ್ ನೋಡಿದರೆ ಗೊತ್ತಾಗುತ್ತದೆ. ಗುಪ್ತದಳದ ವೈಫಲ್ಯ ಆಗಿದೆ ಎಂದು. ಗೃಹ ಸಚಿವರು ಎಚ್ಚರಿಕೆ ವಹಿಸಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ನನಗೆ ರಾಜಕೀಯಕ್ಕಿಂತ ಜನರ ನೆಮ್ಮದಿ ಮುಖ್ಯ. ಮುಗ್ಧ ಜನರನ್ನು ಪೊಲೀಸರು ಬಂಧಿಸುವುದು ಬೇಡ. ಊರು ಬಿಟ್ಟವರಿಗೆ ತೊಂದರೆ ಕೊಡಬೇಡಿ. ಈ ಘಟನೆಯನ್ನು ರಾಜಕೀಯವಾಗಿ ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.
ನಾನು ರಾಜಕೀಯ ಮಾಡಲು ಬಂದಿಲ್ಲ. ನಾನು ಯಾವ ಕುಮ್ಮಕ್ಕು ಕೊಡಲು ಬಂದಿಲ್ಲ. ಗಲಾಟೆಗೆ ಕುಮ್ಮಕ್ಕು ಕೊಟ್ಟಿದ್ದು ಯಾರು? ಜೆಡಿಎಸ್ ನವರು ಬೆಂಕಿ ಹಚ್ಚಿ ಎಂದು ಹೇಳಿದರಾ? ಪೊಲೀಸರನ್ನು ಯಾರು ಕಳಿಸಿದ್ದು? ಪೊಲೀಸರು ಇದ್ದಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ನಾನು ಎರಡು ಸಮುದಾಯದ ಜನರಿಗೆ ಆರ್ಥಿಕ ಪರಿಹಾರ ನೀಡಿದ್ದೇನೆ. ನಾನು ಬೆಂಕಿ ಹಚ್ಚಲು ಬಂದಿಲ್ಲ, ರಾಜಕೀಯ ಮಾಡಲು ಬಂದಿಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕ ಸುರೇಶ್ ಗೌಡ, ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಮಂಜೆಗೌಡ, ಇತರೆ ಮುಖಂಡರು ಉಪಸ್ಥಿತರಿದ್ದರು.