ಶಾಲಾ ಶಿಕ್ಷಣ ಇಲಾಖೆಯ ಕನ್ನಡ ವಿರೋಧಿ ಧೋರಣೆ ಖಂಡನೀಯ : ಬಿಳಿಮಲೆ ಆಕ್ಷೇಪ

Update: 2024-09-19 19:24 GMT

ಬೆಂಗಳೂರು: ‘ಪಿಎಂ ಪೋಷಣ್ ಯೋಜನೆ’ಯ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ಅನೇಕ ವ್ಯಾಕರಣ ದೋಷಗಳಿದ್ದು, ಶಾಲಾ ಶಿಕ್ಷಣ ಇಲಾಖೆಯ ಕನ್ನಡ ವಿರೋಧಿ ಧೋರಣೆ ಖಂಡನೀಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಪತ್ರ ಬರೆದಿರುವ ಅವರು, ಸುತ್ತೋಲೆಯಲ್ಲಿ ಹಲವಾರು ಹಿಂದಿಯ ಪದಗಳನ್ನು ಕನ್ನಡಕ್ಕೆ ತರ್ಜುಮೆಯೇ ಇಲ್ಲದೇ ಹಾಗೆಯೇ ಬಳಸಿಕೊಂಡಿರುವ ಔಚಿತ್ಯವೂ ಪ್ರಶ್ನಾರ್ಹವಾಗಿದೆ. ಪರಿಕಲ್ಪನೆಯನ್ನು ಕನ್ನಡದಲ್ಲಿ ಮೂಡಿಸಿ ಜೊತೆಯಲ್ಲಿ ಈ ಪದಗಳನ್ನು ಬಳಸಿಕೊಂಡಿದ್ದಲ್ಲಿ ಹೆಚ್ಚು ಅರ್ಥಪೂರ್ಣವಾಗುವ, ಇಲಾಖೆಯ ಭಾಷಾ ಬದ್ಧತೆಯ ಪ್ರತೀಕವಾಗುವ ಅವಕಾಶವಿತ್ತು ಎಂದಿದ್ದಾರೆ.

ಕೇಂದ್ರ ಸರಕಾರದ ಧನ ಸಹಾಯದ ನೆಪದಲ್ಲಿ ಈ ರೀತಿಯ ಹಿಂದಿ ಹೇರಿಕೆ ಅಪೇಕ್ಷಣೀಯವಲ್ಲ. ಇದು ಇಡೀ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಕ್ರಮ ಎಂದಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿ ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರಕಾರದ ಇಲಾಖೆಗಳ ಆಡಳಿತದಲ್ಲಿ, ವಿಶೇಷವಾಗಿ ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಇಂತಹ ತಪ್ಪುಗಳಿಗೆ ಅವಕಾಶ ಇರಬಾರದು. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಕನ್ನಡ ವಿರೋಧಿಗಳಾದರೆ ಕನ್ನಡವು ಕರ್ನಾಟಕದಲ್ಲಿ ಉಳಿಯುವ ಪ್ರಾಥಮಿಕ ಅವಕಾಶಗಳನ್ನೇ ಕಳೆದುಕೊಳ್ಳುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News