ಮೆಟ್ರೋ ನಿಲ್ದಾಣಕ್ಕೆ ‘ಶಂಕರ್‌ ನಾಗ್’ ಹೆಸರಿಡಲು ಆಗ್ರಹ : ಗಜೇಂದ್ರ

Update: 2024-11-09 11:26 GMT

ಬೆಂಗಳೂರು : ನಗರದಲ್ಲಿ ಮೆಟ್ರೋ ಬರಬೇಕೆಂಬ ಕನಸು ಕಂಡಿದ್ದ ಚಿತ್ರ ನಟ ಶಂಕರ್‌ ನಾಗ್ ಅವರ ಹೆಸರನ್ನು ಇಲ್ಲಿಯವರೆಗೂ ಮೆಟ್ರೋ ನಿಲ್ದಾಣಕ್ಕೆ ಇಡದೇ ಇರುವುದು ದುರಂತ. ಈಗಲಾದರೂ ರಾಜ್ಯ ಸರಕಾರ ಯಾವುದಾದರೂ ಒಂದು ಮೆಟ್ರೋ ನಿಲ್ದಾಣಕ್ಕೆ ಶಂಕರ್‌ನಾಗ್ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಯುವ ಕನ್ನಡ ಪರ ಹೋರಾಟಗಾರ ಗಜೇಂದ್ರ ಆಗ್ರಹಿಸಿದ್ದಾರೆ.

ಶನಿವಾರ ಶ್ರೀನಗರ, ಬೃಂದಾವನ ನಗರದಲ್ಲಿ ‘ಶಂಕರ್‌ ನಾಗ್ ಕನ್ನಡ ಜ್ಯೋತಿ ಗೆಳೆಯರ ಬಳಗʼದ ವತಿಯಿಂದ ಹಮ್ಮಿಕೊಂಡಿದ್ದ ‘ಕನ್ನಡ ರಾಜ್ಯೋತ್ಸವ ಮತ್ತು ಶಂಕರ್‌ ನಾಗ್ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ಜಾತಿ, ಧರ್ಮದ ವೋಟುಗಳು ಬೇಕಾಗಿರುವುದರಿಂದ ಅವರು, ಅವುಗಳಿಗೆ ಪೂರಕವಾದ ಕೆಲಸ ಮಾಡುತ್ತಾರೆಯೇ ಹೊರತು, ರಾಜ್ಯದ ಒಳಿತಿಗಾಗಿ ಶ್ರಮವಹಿಸಿ ದುಡಿದ ಶಂಕರ್‌ನಾಗ್ ಅಂತಹವರ ಆಶಯಗಳಿಗಾಗಿ ಕೆಲಸ ಮಾಡುವುದಿಲ್ಲ ಮತ್ತು ಸ್ಮರಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಂಕರ್‌ ನಾಗ್ ಅವರು ರಾಜ್ಯದ ಅಭಿವೃದ್ಧಿಗಾಗಿ ಅಧ್ಯಯನ ಮಾಡಿ 35 ವರ್ಷಗಳ ಹಿಂದೆಯೇ ಮೆಟ್ರೋ ನಿರ್ಮಾಣದ ಕನಸು ಕಂಡಿದ್ದರು. ಬಡವರಿಗಾಗಿ ಕಡಿಮೆ ಬೆಲೆಯಲ್ಲಿ ಫ್ರೀ ಫ್ಯಾಬ್ರಿಕೇಟೆಡ್ ಮನೆ ನಿರ್ಮಾಣ, ನಂದಿ ಬೆಟ್ಟಕ್ಕೆ ರೂಫ್‌ವೇ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪ್ರತಿ 100ಕಿ.ಮೀ.ಗಳಿಗೆ ಒಂದು ಆಸ್ಪತ್ರೆ ನಿರ್ಮಿಸುವುದು, ಕಂಟ್ರಿ ಕ್ಲಬ್ ಎನ್ನುವ ಕ್ಲಬ್ ನಿರ್ಮಿಸಿ ಅದರಲ್ಲಿ ಬರುವ ಹಣದಿಂದ ಬಡವರಿಗೆ ಸಹಕಾರಿಯಾಗುವಂತ ಕೆಲಸಗಳನ್ನು ಮಾಡಬೇಕೆಂದು ಕನಸು ಕಂಡು ಅದಕ್ಕಾಗಿ ದುಡಿದವರು ಎಂದು ಅವರು ಮಾಹಿತಿ ನೀಡಿದರು.

ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಸಂಗೀತದ ರಿಕಾರ್ಡಿಂಗ್ ಮತ್ತು ಡಬ್ಬಿಂಗ್‌ಗೆ ಮದ್ರಾಸ್ ಅಥವಾ ಮುಂಬೈಗೆ ಅಲೆಯಬೇಕಾಗಿತ್ತು. ಕನ್ನಡ ಚಿತ್ರರಂಗದವರು ಎದುರಿಸುತ್ತಿದ್ದ ಅವಮಾನಗಳನ್ನು ತಡೆಯಲೇಬೇಕೆಂದು ಪಣತೊಟ್ಟು, ಬೆಂಗಳೂರಿನಲ್ಲೇ ಪ್ರಪ್ರಥಮವಾಗಿ ಕಂಪ್ಯೂಟರೈಸ್ಡ್ ರೆಕಾರ್ಡಿಂಗ್ ಆಗಿರುವ ‘ಸಂಕೇತ್ ಸ್ಟುಡಿಯೋ’ ನಿರ್ಮಾಣ ಮಾಡಿದ್ದರು. ಇಂತಹ ಸ್ವಾಭಿಮಾನಿ ಕನ್ನಡಿಗನನ್ನು ಸ್ಮರಿಸಲು ಕನ್ನಡ ಚಿತ್ರರಂಗ ಸೋತಿರಬಹುದು. ಆದರೆ ಕನ್ನಡಿಗರು ನಾವು ಎಂದಿಗೂ ಸೋತಿಲ್ಲ ಎಂದು ಗಜೇಂದ್ರ ಹೇಳಿದರು.

ಕಾರ್ಯಕ್ರಮದಲ್ಲಿ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ಸಾವಿರಾರು ನಾಗರಿಕರು ಆರೋಗ್ಯ ತಪಾಸಣೆ ಶಿಬಿರದ ಅನುಕೂಲವನ್ನು ಪಡೆದುಕೊಂಡರು. ಡಾ.ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ಯುವಜನತೆ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಸದಸ್ಯ ಟಿ.ತಿಮ್ಮೇಗೌಡ, ಕನ್ನಡ ಪರ ಹೋರಟಗಾರರಾದ ತೆರಿಕಲ್ ರಕ್ಷಿತ್, ಸಂಘದ ಪದಾಧಿಕಾರಿಗಳು ನಾಗೇಂದ್ರ, ಪ್ರಸಾದ್, ಚಂದ್ರ ಶೇಖರ್, ಅಶೋಕ್, ಪ್ರಮೋದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ ಶಂಕರ್‌ ನಾಗ್ ಅಂತಹವರನ್ನು ಎಲ್ಲ ರಾಜಕೀಯ ಪಕ್ಷಗಳು ಮರೆತಿರುವುದು ದುರಂತ. ರಾಜ್ಯ ಸರಕಾರ ಮುಂದಿನ ದಿನಗಳಲ್ಲಿ ‘ಶಂಕರ್‌ನಾಗ್’ ಹೆಸರಿನಲ್ಲಿ ಮೆಟ್ರೋ ನಿಲ್ದಾಣ ನಾಮಕರಣ ಮಾಡಬೇಕು. ಮೈಸೂರಿನಲ್ಲಿ ನಿರ್ಮಾಣವಾಗುವ ‘ಕನ್ನಡ ಫಿಲ್ಮ್ ಸಿಟಿ’ಗೆ ಶಂಕರ್‌ನಾಗ್ ಹೆಸರಿಡಬೇಕು.

- ಪ್ರಸಾದ್, ಶಂಕರ್‌ನಾಗ್ ಕನ್ನಡ ಜ್ಯೋತಿ ಗೆಳೆಯರ ಬಳಗದ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News