ಬೆಂಗಳೂರು: ಚಿನ್ನ-ವಜ್ರಾಭರಣ ದೋಚಿದ್ದ ಆರೋಪಿಯ ಬಂಧನ

Update: 2023-11-29 16:46 GMT

ಬೆಂಗಳೂರು: ಕಾರಿನ ಟೈರ್ ಪಂಚರ್ ಆಗಿದೆ ಎಂದು ಉದ್ಯಮಿ ದಂಪತಿಯ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂ. ಮೌಲ್ಯದ ಚಿನ್ನ-ವಜ್ರಾಭರಣಗಳನ್ನು ದೋಚಿದ್ದ ಆರೋಪಿಯನ್ನು ಇಲ್ಲಿನ ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಆಂಧ್ರಪ್ರದೇಶ ಮೂಲದ ಗಿರಿಕುಮಾರ್ ಯಾನೆ ಗಿರಿನ್‍ಕುಮಾರ್(41) ಬಂಧಿತ ಆರೋಪಿಯಾಗಿದ್ದು, ಆತನಿಂದ 25ಲಕ್ಷ ರೂ. ಮೌಲ್ಯದ ವಜ್ರ, ಚಿನ್ನ ಸೇರಿದಂತೆ 449ಗ್ರಾಂ ತೂಕದ ಆಭರಣಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಅ.21ರಂದು ಉದ್ಯಮಿ ಕೆಂಗೇರಿಯ ರಾಜೇಶ್ ಶ್ರೀವಾಸ್ತವ್ ಅವರು ಕೆಂಗೇರಿಯ ಮೈಸೂರು ರಸ್ತೆಯಲ್ಲಿರುವ ಬಿಡಿಎ ಅಪಾರ್ಟ್‍ಮೆಂಟ್ ಹತ್ತಿರ ಪತ್ನಿ ಜೊತೆ ಕಾರನ್ನು ನಿಲ್ಲಿಸಿಕೊಂಡು ನಿಂತಿರುವಾಗ ಬಂದ ಆರೋಪಿಯು ಕಾರಿನ ಟೈರ್ ಪಂಚರ್ ಆಗಿದೆ ಎಂದು ಗಮನವನ್ನು ಬೇರೆಡೆಗೆ ಸೆಳೆದು ಕಾರಿನಲ್ಲಿದ್ದ ಚಿನ್ನ ವಜ್ರಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ.

ಈ ಸಂಬಂಧ ರಾಜೇಶ್ ಶ್ರೀವಾಸ್ತವ್ ಎಂಬುವರು ನೀಡಿದ ದೂರು ಆಧರಿಸಿ ದಾಖಲಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೆಂಗೇರಿ ಪೊಲೀಸ್ ಇನ್‍ಸ್ಪೆಕ್ಟರ್ ಸಂಜೀವೇಗೌಡ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಚಿನ್ನ, ವಜ್ರಾಭರಣಗಳನ್ನು ಜಪ್ತಿ ಮಾಡಿದ್ದಾರೆ ಎಂದು ಡಿಸಿಪಿ ಎಸ್.ಗಿರೀಶ್ ಹೇಳಿದ್ದಾರೆ.

ಆರೋಪಿಯು ಓಜಿ ಕುಪ್ಪಂ ಗುಂಪಿನ ಖದೀಮನಾಗಿದ್ದು, ನಗರದ ಹಲವೆಡೆ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂ. ಮೌಲ್ಯದ ಚಿನ್ನ, ವಜ್ರ, ಬೆಳ್ಳಿ, ಲ್ಯಾಪ್‍ಟಾಪ್, ಮೊಬೈಲ್ ಕಳವು ಮಾಡುತ್ತಿದ್ದು, ಹಲವು ಬಾರಿ ಜೈಲಿಗೆ ಹೋಗಿ ಬಂದರೂ ಬುದ್ದಿ ಕಲಿಯದೇ ಕಳ್ಳತನ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಎಂದು ಡಿಸಿಪಿ ಎಸ್.ಗಿರೀಶ್ ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News