ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ ನಾಳೆ ಸಿಎಂ ಸಿದ್ದರಾಮಯ್ಯರಿಂದ ಅಧಿಕೃತ ಉದ್ಘಾಟನೆ
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುವ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭವಾಗಿದ್ದು, ಭರ್ಜರಿ ಜನ ಭೇಟಿ ನೀಡುತ್ತಿದ್ದಾರೆ. ಐದು ದಿನಗಳ ಕಾಲ ನಡೆಯುವ ಪರಿಷೆಗೆ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ (ಡಿ.11ಕ್ಕೆ) ಚಾಲನೆ ನೀಡಲಿದ್ದಾರೆ.
ಮಧುವಣಗಿತ್ತಿಯಂತೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ಸುತ್ತಮುತ್ತಲಿನ ಆವರಣ, ರಸ್ತೆ ಸಿದ್ಧವಾಗಿದೆ. ರಾಮಕೃಷ್ಣಮಠದಿಂದ ಹಿಡಿದು ಎನ್‍ಆರ್ ಕಾಲೋನಿವರೆಗೂ ಬುಲ್ ಟೆಂಪಲ್ ರಸ್ತೆಯ ತುಂಬೆಲ್ಲಾ ಕಡಲೆಕಾಯಿ ಮಾರಾಟ ಜೋರಿದೆ.
200ಕ್ಕೂ ಹೆಚ್ಚು ಕಡಲೆಕಾಯಿ ವ್ಯಾಪಾರಿಗಳು ಈ ಒಂದು ರಸ್ತೆಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ. ವಿವಿಧ ಊರು, ವಿವಿಧ ತಳಿಯ ಕಡಲೆಕಾಯಿಗಳು ಲಭ್ಯವಿದ್ದು, ರಾಜಧಾನಿ ಜನ ಕಡಲೆಕಾಯಿ ಸವಿದು ಜಾತ್ರೆಯಲ್ಲಿ ಸುತ್ತಿ ಸಂಭ್ರಮಿಸುತ್ತಿದ್ದಾರೆ.
ಸೋಮವಾರ ಬೆಳಗ್ಗೆ ಅಧಿಕೃತ ಉದ್ಘಾಟನೆ: ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಡಲೆಕಾಯಿ ಪರಿಷೆಯನ್ನು ಉದ್ಘಾಟಿಸಲಿದ್ದಾರೆ. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಭಾಗಿಯಾಗಲಿದ್ದಾರೆ.
ಈ ಸಂದರ್ಭದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ದೊಡ್ಡ ಬಸವಣ್ಣನಿಗೆ ಚೀಲಗಟ್ಟಲೆ ಕಡಲೆಕಾಯಿ ಅಭಿಷೇಕ ನಡೆಯಲಿದೆ. ರೈತರು ಮತ್ತು ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸುತ್ತಾರೆ.
ಪರಿಷೆಯ ಸಿದ್ಧತೆ ಪರಿಶೀಲಿಸಿದ ಸಚಿವ ರಾಮಲಿಂಗಾರೆಡ್ಡಿ
ಡಿ.11ರಿಂದ ಬಸವನಗುಡಿ ಕಡಲೆಕಾಯಿ ಪರಿಷೆಗೆ ಚಾಲನೆ ಸಿಗುವ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ರವಿವಾರ ದೊಡ್ಡ ಗಣೇಶನ ದೇವಸ್ಥಾಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಕಡಲೆಕಾಯಿ ಪರಿಷೆಯ ಸಿದ್ಧತೆಗಳನ್ನ ಪರಿಶೀಲಿಸಿದರು. ಕಡಲೆಕಾಯಿ ಪರಿಷೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.