ಬೆಂಗಳೂರು| ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಓರ್ವ ಮೃತ್ಯು, ಇಬ್ಬರಿಗೆ ಗಾಯ

Update: 2024-04-15 14:20 GMT

Photo: NDTV

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ತೆರಳುವಾಗ ಜಲಮಂಡಳಿಯಿಂದ ತೋಡಲಾಗಿದ್ದ ಗುಂಡಿಗೆ ಬಿದ್ದು ಯುವಕನೋರ್ವ ಮೃತಪಟ್ಟು, ಮತ್ತಿಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ದಾರುಣ ಘಟನೆ ಇಲ್ಲಿನ ಕೆಂಗೇರಿ ಸಮೀಪದ ಕೊಮ್ಮಘಟ್ಟ ಸರ್ಕಲ್‍ನಲ್ಲಿ ರವಿವಾರ ರಾತ್ರಿ ವರದಿಯಾಗಿದೆ.

ಸದ್ದಾಂ ಹುಸೇನ್(20) ಎಂಬುವನನ್ನು ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಉಮ್ರಾನ್ ಪಾಷಾ ಹಾಗೂ ಮುಬಾರಕ್ ಪಾಷಾ ಎಂಬುವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆಂಗೇರಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಈ ಮೂವರು ಸ್ನೇಹಿತರಾಗಿದ್ದು ಜೆ.ಜೆ.ನಗರ ನಿವಾಸಿಗಳಾಗಿದ್ದಾರೆ. ರವಿವಾರ ರಾತ್ರಿ ಸುಮಾರು 9ಗಂಟೆ ವೇಳೆಗೆ ಸದ್ದಾಂ ಹುಸೇನ್ ತನ್ನ ಸ್ನೇಹಿತರನ್ನು ಕೂರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬರುವಾಗ ಕೊಮ್ಮಘಟ್ಟ ಬಳಿ ಜಲಮಂಡಳಿಯು ಪೈಪ್ ಕಾಮಗಾರಿಗಾಗಿ ತೋಡಿದ್ದ ಸುಮಾರು 10 ಅಡಿ ಗುಂಡಿಗೆ ದ್ವಿಚಕ್ರ ವಾಹನ ಸಮೇತ ಬಿದ್ದಿದ್ದಾರೆ. ಪರಿಣಾಮ ಸದ್ದಾಂ ಹುಸೇನ್ ಸಾವನ್ನಪ್ಪಿದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಸ್ಥಳೀಯರ ನೆರವಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಕೆಂಗೇರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೈಪ್‍ಲೈನ್ ಕಾಮಗಾರಿ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಯಾವುದೇ ಬ್ಯಾರಿಕೇಡ್ ಅಥವಾ ಸೂಚನಾ ಫಲಕ ಅಳವಡಿಸದಿರುವುದು ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸದ್ಯ ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News