ಬೆಂಗಳೂರು ವಿವಿ ಭೂಪ್ರದೇಶ ಸರ್ವೇ ನಡೆಸಿ: ಸಚಿವ ಎಂ.ಸಿ ಸುಧಾಕರ್‌ ಸೂಚನೆ

Update: 2024-01-05 14:02 GMT

ಬೆಂಗಳೂರು: ಬೆಂಗಳೂರು ವಿವಿ ವ್ಯಾಪ್ತಿಗೆ ಒಳಪಡುವ 1,201ಎಕರೆ ಭೂ ಪ್ರದೇಶದಲ್ಲಿ ಆಗಿರುವ ಅತಿಕ್ರಮ ಹಾಗೂ ವಿವಿ ಜಮೀನಿನ ಅರ್ ಟಿಸಿ ಹೊಂದಿರುವ ಖಾಸಗಿ ವ್ಯಕ್ತಿಗಳ ಬಗ್ಗೆ ಸಂಪೂರ್ಣ ಸರ್ವೇ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶುಕ್ರವಾರ ನಗರದಲ್ಲಿರುವ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಸಬಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ವಿ.ವಿಯ ವ್ಯಾಪ್ತಿಗೆ ಒಳಪಡುವ ಕೆಲ ಭೂಪ್ರದೇಶವನ್ನು ಗುತ್ತಿಗೆ ಆಧಾರದಲ್ಲಿ ವಿತರಣೆ ಮಾಡಲಾಗಿದೆ. ಇನ್ನು ಕೆಲ ಭೂಪ್ರದೇಶ ಒತ್ತುವರಿಯಾಗಿದೆ. ಇದನ್ನು ಸರ್ವೇ ನಡೆಸಬೇಕಿದೆ ಎಂದರು.

ವಿ.ವಿ ಭೂಪ್ರದೇಶಕ್ಕೆ ಸಂಬಂಧಪಟ್ಟ ಕೈಬರಹದ ದಾಖಲೆ ಹಾಗೂ ಈಗಿನ ಕಂಪ್ಯೂಟರ್ ದಾಖಲೆಗಳನ್ನು ಸಂಗ್ರಹಿಸಿ, ಮೂಲ ಟಿಪ್ಪಣಿ ಸೇರಿದಂತೆ ಎಲ್ಲ ದಾಖಲೆಗಳನ್ನು ಭೂಮಾಪನ ಇಲಾಖೆಯ ಸಹಕಾರದೊಂದಿಗೆ ಸಂಗ್ರಹಿಸಬೇಕು ಎಂದು ಅವರು ಹೇಳಿದರು.

ಒಟ್ಟು ವಿಸ್ತೀರ್ಣದ 1201 ಎಕರೆ ಭೂಮಿಯಲ್ಲಿ ಸರ್ವೇ ಮಾಡಿದಾಗ 1184.16 ಎಕರೆ ವಿಸ್ತೀರ್ಣ ದೊರೆತಿದೆ. ಈಗ ಒಟ್ಟು 278 ಎಕರೆ ಭೂಪ್ರದೇಶವನ್ನು 26 ಶಿಕ್ಷಣ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಈ ಗುತ್ತಿಗೆ ಶಿಕ್ಷಣ ಸಂಸ್ಥೆಗಳು 313 ಎಕರೆ ಸ್ವಾದಿನದಲ್ಲಿರುವುದು ಕಂಡುಬಂದಿದೆ. ಹಾಗೆಯೆ ದಾಖಲೆಯ ಪ್ರಕಾರ 34.4 ಎಕರೆ ಅತಿಕ್ರಮ ಪ್ರದೇಶವಾಗಿದ್ದು, ಒಟ್ಟು 43.24 ಎಕರೆಯಲ್ಲಿ ಉತ್ತವರಿದಾರರ ಸ್ವಾಧೀನದಲ್ಲಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದರು.

ಅತಿಕ್ರಮಗೊಂಡಿರುವ ಪ್ರದೇಶಗಳ ಪೈಕಿ 19 ಎಕರೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ಎಲ್ಲ ವಿವರಗಳ ಬಗ್ಗೆ ಸಂಪೂರ್ಣ ದಾಖಲೆ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಕಾನೂನುಬದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಭೂಮಾಪನ ಇಲಾಖೆ ಹಾಗೂ ವಿವಿ ಜಂಟಿಯಾಗಿ ಸರ್ವೇ ನಡೆಸಿ ವಿವಿ ಆಸ್ತಿಯನ್ನು ಕಾಪಾಡಿಕೊಳ್ಳುವ ಮೂಲಕ ಕೋಟ್ಯಾಂತರ ರೂ.ಬೆಲೆ ಬಾಳುವ ಜಮೀನನ್ನು ಉಳಿಸಿಕೊಳ್ಳುವ ಜವಾಬ್ದಾರಿಯಿದೆ ಎಂದು ಡಾ.ಸುಧಾಕರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News